IPL 2024 Trophy : ಸನ್‌ರೈಸರ್ಸ್‌ ಮಣಿಸಿ 3ನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಕೋಲ್ಕತಾ ನೈಟ್ ರೈಡರ್ಸ್

KKR Won The IPL 2024 Trophy : 17ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಮಣಿಸಿ ಕೋಲ್ಕತ್ತಾ ನೈಟ್​ ರೈಡರ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಚೆನ್ನೈ : ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ 3ನೇ ಬಾರಿ ಐಪಿಎಲ್ ಟಿ-20 ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾನುವಾರ ಚೆನ್ನೈನಲ್ಲಿ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. 113 ರನ್​​ಗಳ ಬೆನ್ನತ್ತಿದ ಕೋಲ್ಕತಾ ನೈಟ್ ರೈಸರ್ಸ್ ತಂಡ 10.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಗಳ ಜಯಭೇರಿ ಬಾರಿಸಿತು.

ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಕೆಕೆಆರ್ 2012 ಮತ್ತು 2014ರ ನಂತರ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೇ 20 ಕೋಟಿ ರೂ. ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿತು.

ಕೆಕೆಆರ್ ಆರಂಭದಲ್ಲೇ ಸುನೀಲ್ ನರೇನ್ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್ ಗೆ ರಹಮತುಲ್ಲಾ ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್ 91 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಗುರ್ಬಾಜ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 39 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ ಅಜೇಯ 52 ರನ್ ಬಾರಿಸಿದರು.

ಆರ್​ಸಿಬಿ ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದರೆ, ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದರು.

ಐಪಿಎಲ್ ತಂಡಗಳಿಗೆ ಸಿಕ್ಕ ಬಹುಮಾನ ಮೊತ್ತ :

ವಿಜೇತರು – 20 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್)

ರನ್ನರ್ ಅಪ್ – 13 ಕೋಟಿ (ಸನ್​ರೈಸರ್ಸ್ ಹೈದರಾಬಾದ್)

3ನೇ ಸ್ಥಾನ – 7 ಕೋಟಿ (ರಾಜಸ್ಥಾನ್ ರಾಯಲ್ಸ್)

4ನೇ ಸ್ಥಾನ – 6.5 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಐಪಿಎಲ್​ನಲ್ಲಿ ಟ್ರೋಫಿ ಗೆದ್ದ ಭಾರತದ 5ನೇ ಆಟಗಾರ :

ಐಪಿಎಲ್​ನಲ್ಲಿ ಟ್ರೋಫಿ ಗೆದ್ದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮಾ (5 ಟ್ರೋಫಿ), ಎಂಎಸ್ ಧೋನಿ (5 ಟ್ರೋಫಿ), ಗೌತಮ್ ಗಂಭೀರ್​ (2 ಟ್ರೋಫಿ), ಹಾರ್ದಿಕ್ ಪಾಂಡ್ಯ (1) ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದ ಭಾರತೀಯ ನಾಯಕರು.

Author

error: