ಇಂದಿರಾ ಕ್ಯಾಂಟೀನ್​​ ಆಯ್ತು ಈಗ ಇಂದಿರಾ ಸಾರಿಗೆ ಬರ್ತಿದೆ

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್​ ಆಯ್ತು. ಇದೀಗ ಇಂದಿರಾ ಸಾರಿಗೆ ಬರಲಿದೆ. ಶೀಘ್ರದಲ್ಲೇ ಇಂದಿರಾ ಸಾರಿಗೆ ಬಸ್ಸುಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ವಿಶೇಷವಾಗಿ ಗಾರ್ಮೆಂಟ್ಸ್ ಗೆ ಹೋಗುವ ಮಹಿಳೆಯರಿಗಾಗಿ ರಿಯಾಯಿತಿ ಟಿಕೆಟ್ ದರದಲ್ಲಿ ಬಸ್ ಸೇವೆ ಆರಂಭವಾಗಲಿದೆ.

ಹೌದು, ಈಗಾಗಲೇ ನಗರದಲ್ಲಿ ಇಂದಿರಾ ಗಾಂಧಿ ಹೆಸರಲ್ಲಿ ಆರಂಭಿಸಿರುವ ಕ್ಯಾಂಟೀನ್​ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರ ಬೆನ್ನಲ್ಲೆ ಇಂದಿರಾ ಗಾಂಧಿ ಹೆಸರಲ್ಲಿ ಬಸ್​ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸ್ತಿದೆ. ಈ ಮೂಲಕ ನಗರದ ಆಯ್ದ ಪ್ರದೇಶಗಳಿಗೆ ಹೊಸತಾಗಿ ಇಂದಿರಾ ಸಾರಿಗೆ ಬಸ್‌ ಸೇವೆ ಆರಂಭಿಸಲು ರಾಜ್ಯ ಸರ್ಕಾರ ಮತ್ತು ಬಿಎಂಟಿಸಿ ಸಂಸ್ಥೆ ಸಿದ್ಧತೆ ನಡೆಸಿದೆ.

ವಿಶೇಷವಾಗಿ ಗಾರ್ಮೆಂಟ್ಸ್​​ಗೆ ಹೋಗುವ ಮಹಿಳೆಯರಿಗಾಗಿ ಇಂದಿರಾ ಸಾರಿಗೆಯನ್ನು ಪ್ರಾರಂಭಿಸಲಾಗುತ್ತಿದ್ದು, ರಿಯಾಯಿತಿ ಟಿಕೆಟ್ ದರದಲ್ಲಿ ಸೇವೆ ನೀಡಲಾಗುತ್ತೆ. ಈ ಯೋಜನೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಾಗ್ತಿದ್ದು, ಇದೇ ತಿಂಗಳ 19ರಂದು ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವದಂದು ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇಂದಿರಾ ಸಾರಿಗೆ ಆರಂಭಿಸುವ ಬಗ್ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ರೂಪುರೇಷೆ ಸಿದ್ಧಪಡಿಸುತ್ತಿದೆ. ಪ್ರಮುಖವಾಗಿ ನಗರದಾದ್ಯಂತ ಎಷ್ಟು ಬಸ್ಸುಗಳನ್ನ ಬಿಡಬೇಕು? ಯಾವ್ಯಾವ ಭಾಗಗಳಲ್ಲಿ ಇಂದಿರಾ ಸಾರಿಗೆ ನೀಡಬೇಕು? ಅನ್ನುವುದರ ಕುರಿತು ವರದಿ ಸಿದ್ಧಪಡಿಸುತ್ತಿದೆ. ಈಗಾಗಲೇ ವರದಿ ತಯಾರಿ ಕಾರ್ಯ ಆರಂಭವಾಗಿದ್ದು, ಸದ್ಯದಲ್ಲೆ ಅಂತಿಮ ರೂಪುರೇಷೆ ಹೊರಬೀಳಲಿದೆ.

ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಬೆಂಗಳೂರು ನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ‘ಅಟಲ್ ಸಾರಿಗೆ’ಯನ್ನು ಆರಂಭಿಸಲಾಗಿತ್ತು. ನಗರದ ಕೆಲವು ಭಾಗಗಲ್ಲಿ ಮಾತ್ರ ಈ ಬಸ್ಸುಗಳು ಸಂಚಾರ ನಡೆಸುತ್ತಿದ್ದವು. ಪ್ರಯಾಣ ದರವೂ ಕಡಿಮೆ ಇತ್ತು. ಅದೇ ಮಾದರಿಯಲ್ಲಿ ಇಂದಿರಾ ಸಾರಿಗೆಯನ್ನು ಆರಂಭಿಸಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ.

ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *