ಭಾರತದ ಎನ್​ಎಸ್​​ಜಿ ಸದಸ್ಯತ್ವ ಸಂಕೀರ್ಣವಾಗಿದೆ: ಚೀನಾ

ಬೀಜಿಂಗ್: ಹೊಸ ಸನ್ನಿವೇಶಗಳಲ್ಲಿ ಭಾರತದ ಎನ್​ಎಸ್​ಜಿ ಸದಸ್ಯತ್ವ ವಿಷಯ ಮತ್ತಷ್ಟು ಸಂಕೀರ್ಣವಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. 48 ರಾಷ್ಟ್ರಗಳ ಎನ್​​ಎಸ್​​ಜಿ ಗುಂಪಿನ ಸದಸ್ಯತ್ವ ವಿಷಯದಲ್ಲಿ ಭಾರತಕ್ಕೆ ಚೀನಾ ಸತತವಾಗಿ ಅಡ್ಡಿಯುಂಟು ಮಾಡುತ್ತಿದೆ. ಬಹುತೇಕ ರಾಷ್ಟ್ರಗಳು ಭಾರತದ ಸದಸ್ಯತ್ವವನ್ನು ಬೆಂಬಲಿಸಿದ್ದರೂ ಚೀನಾ ಭಾರತಕ್ಕೆ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡುವ ವಿಷಯದಲ್ಲಿ ಭಿನ್ನಾಭಿಪ್ರಾಯ ಎದುರಾಗದಂತೆ ಪರಿಹಾರವೊಂದನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಚೀನಾ ಹೇಳಿದೆ.

ನೂತನ ಸನ್ನಿವೇಶ ನಿರ್ಮಾಣವಾಗಿರುವ ಸಂದರ್ಭದಲ್ಲಿ 48 ರಾಷ್ಟ್ರಗಳ ಗುಂಪಿನಲ್ಲಿ ನೂನತ ದೇಶಗಳಿಗೆ ಸದಸ್ಯತ್ವ ನೀಡುವ ಸಂದರ್ಭದಲ್ಲಿ ಒಮ್ಮತದ ಅಭಿಪ್ರಾಯ ಏರ್ಪಡಬೇಕು ಎಂದು ಚೀನಾದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಲಿ ಹ್ಯುಲೈ ಹೇಳಿದ್ದಾರೆ. ಆದರೆ, ನೂತನ ಸನ್ನಿವೇಶಗಳು ಯಾವುವು ಎಂಬುದನ್ನು ಮಾತ್ರ ಅವರು ವಿಸ್ತರಿಸಿ ಹೇಳಲಿಲ್ಲ. ಸಾರ್ವತ್ರಿಕವಾಗಿ ಎಲ್ಲ ಸದಸ್ಯರಿಗೂ ಅನ್ವಯವಾಗುವ ನಿಯಮಗಳನ್ನು ಒಪ್ಪಿಕೊಳ್ಳುವ ದೇಶಕ್ಕೆ ಸದಸ್ಯತ್ವ ನೀಡುವುದನ್ನು ಚೀನಾ ಬೆಂಬಲಿಸುತ್ತದೆ ಎಂದು ಕೂಡ ಅವರು ಹೇಳಿದರು.

ಕಳೆದ ತಿಂಗಳು ಈ ಕುರಿತು ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ ವಕ್ತಾರ ಹೌ ಚುನ್​ಯಿಂಗ್, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡುವ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದರು. ಈ ಮೂಲಕ ಭಾರತದ ಸದಸ್ಯತ್ವಕ್ಕೆ ತಮ್ಮ ಬೆಂಬಲವಿಲ್ಲ ಎಂದು ಪರೋಕ್ಷವಾಗಿ ಚೀನಾ ಹೇಳಿತ್ತು.

ಚೀನಾ ಮತ್ತು ಭಾರತ ಮಹತ್ವದ ನೆರೆಹೊರೆಯ ದೇಶಗಳು. ಈ ಎರಡೂ ದೇಶಗಳು ಅಭಿವೃದ್ಧಿಹೊಂದುತ್ತಿವೆ. ಅಲ್ಲದೇ ಎರಡೂ ದೇಶಗಳು ಬೃಹತ್ ಆರ್ಥಿಕ ಮಾರುಕಟ್ಟೆಯಾಗಿ ಬೆಳೆಯುತ್ತಿವೆ. ಶಾಂತಿ ಮತ್ತು ಸ್ಥಿರತೆಗೆ ಈ ದೇಶಗಳು ಒತ್ತು ನೀಡಿವೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದರು.

ಪಾಕಿಸ್ತಾನ ಕೂಡ ಎನ್​ಎಸ್​​ಜಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದೆ. ಪಾಕಿಸ್ತಾನದ ಸದಸ್ಯತ್ವವನ್ನು ಚೀನಾ ಬಹಿರಂಗವಾಗಿ ಬೆಂಬಲಿಸಿಲ್ಲ. ಆದರೆ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಸದಸ್ಯತ್ವ ನೀಡುವುದಕ್ಕೆ ಚೀನಾ ಆರಂಭದಿಂದ ತಕರಾರು ತೆಗೆಯುತ್ತಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *