ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಮಾತುಕತೆ ಒಟ್ಟಿಗೆ ನಡೆಯದು

ನವದೆಹಲಿ: ಪಾಕಿಸ್ತಾನದೊಂದಿಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತ ಸಿದ್ಧವಿದೆ. ಆದರೆ, ಭಯೋತ್ಪಾನೆ ಮತ್ತು ದ್ವಿಪಕ್ಷೀಯ ಮಾತುಕತೆಗಳನ್ನು ಒಟ್ಟಿಗೆ ನಡೆಸುವುದು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಮೂಲಕ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಭಯೋತ್ಪಾದನಾ ಕೃತ್ಯವನ್ನು ನಿಲ್ಲಿಸಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಭಾರತ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಲು ಸಿದ್ಧವಿದೆ. ಆದರೆ, ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಪರಮಾಣು ಪೂರೈಕೆದಾರರ ಗುಂಪಿಗೆ ಸೇರಲು ಚೀನಾದೊಂದಿಗೆ ಚರ್ಚಿಸಲು ದೇಶಗಳ ಬೆಂಬಲವನ್ನು ಕೂಡ ಅವರು ಬಯಸಿದ್ದಾರೆ.

ಸುಷ್ಮಾ ಸ್ವರಾಜ್ ಮತ್ತು ಅವರ ಇಬ್ಬರು ಸಹಾಯಕ ಸಚಿವರು ಕೇಂದ್ರ ಸರ್ಕಾರದ 3 ವರ್ಷಗಳ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ಸಾಧನೆಗಳನ್ನು ಮಾಧ್ಯಮದ ಮುಂದಿಟ್ಟರು. ಇನ್ನು ಚಮೋಲಿ ಜಿಲ್ಲೆಯಲ್ಲಿ ಚೀನಾದ ಹೆಲಿಕಾಪ್ಟರ್​ಗಳು ಹಾರಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ತಮ್ಮ ತಕರಾರನ್ನು ಚೀನಾದ ಎದುರು ಮಂಡಿಸುವುದಾಗಿ ಹೇಳಿದರು.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ನಂತರ ಕೂಡ ಬರಾಕ್ ಒಬಾಮ ಅವರ ಅವಧಿಯಂತೆಯೇ ಭಾರತ ಮತ್ತು ಅಮೆರಿಕ ನಡುವೆ ಸಂಬಂಧ ಸುಧಾರಿಸುತ್ತಿದೆ ಎಂದು ಕೂಡ ಅಭಿಪ್ರಾಯಪಟ್ಟರು. ಅಲ್ಲದೇ ಚೀನಾದ ಮಹತ್ವಾಕಾಂಕ್ಷೆಯ ಒನ್​ ಬೆಲ್ಟ್​ ಒನ್​​ ರೋಡ್ ಯೋಜನೆಯ ಕುರಿತು ಭಾರತದ ವಿರೋಧವನ್ನು ಸುಷ್ಮಾ ಸ್ವರಾಜ್ ಪುನರುಚ್ಛರಿಸಿದರು. ಈ ಯೋಜನೆ ಭಾರತದ ಸಾರ್ವಭೌಮತೆಯ ವಿಷಯಕ್ಕೆ ಸಂಬಂಧಿಸಿದೆ. ಆದ್ದರಿಂದ ಈ ಯೋಜನೆಗೆ ಭಾರತದ ಬೆಂಬಲವಿಲ್ಲ ಎಂದರು.

ಪ್ಯಾರಿಸ್ ಹವಾಮಾನ ಒಪ್ಪಂದದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹವಾಮಾನ ವೈಪರೀತ್ಯ ಮತ್ತು ತಾಪಮಾನ ನಿಯಂತ್ರಣ ಕುರಿತ ಬದ್ಧತೆಯಿಂದಾಗಿ ಸಹಿ ಹಾಕಲಾಗಿದೆಯೇ ಹೊರತು, ಯಾವುದೇ ಒತ್ತಡ ಅಥವಾ ಹಣಕಾಸಿನ ಲಾಭಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಡೊನಾಲ್ಡ್ ಟ್ರಂಪ್ ಅವರು ಭಾರತ 2015ರ ಪ್ಯಾರಿಸ್ ಹವಾಮಾನ ವೈಪರೀತ್ಯ ಒಪ್ಪಂದಕ್ಕೆ ಸಹಿ ಹಾಕಲ ಬಿಲಿಯನ್ ಡಾಲರ್​​ಗಟ್ಟಲೇ ಹಣ ಪಡೆದಿದೆ ಎಂದು ಆರೋಪಿಸಿದ್ದರು. ಟ್ರಂಪ್ ಹೇಳಿರುವುದು ವಾಸ್ತವವಲ್ಲ. ಆತ್ಮಸಾಕ್ಷಿಯಿಂದ ಈ ಒಪ್ಪಂದಕ್ಕೆ ಸಹಿಹಾಕಲಾಗಿದೆ ಎಂದು ಅವರು ಟ್ರಂಪ್ ಅವರಿಗೆ ತಿರುಗೇಟು ನೀಡಿದರು.

ಭಾರತದಲ್ಲಿ ಪ್ರಕೃತಿಯ ಆರಾಧನೆಗೆ 5,000 ವರ್ಷಗಳ ಪರಂಪರೆ ಇದೆ. ಯಾರಾದರೂ ನಾವು ಹಣಕಾಸಿನ ಲಾಭಕ್ಕಾಗಿ ಸಹಿ ಹಾಕಿದ್ದೇವೆ ಎನ್ನುವುದು ತಪ್ಪು. ನಾವು ನಮ್ಮ ಬದ್ಧತೆಯಿಂದ ಸಹಿ ಹಾಕಿದ್ದೇವೆ. ಅಮೆರಿಕ ಒಪ್ಪಂದಕ್ಕೆ ಬದ್ಧವಾಗಲಿ ಅಥವಾ ಆಗದಿರಲಿ. ಭಾರತ ಮಾತ್ರ ಈ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ಕೂಡ ಅವರು ಹೇಳಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *