ದ್ವಿಪಕ್ಷೀಯ ಮಾತುಕತೆ ನಡೆಸೋಣ: ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಪತ್ರ

ಇಸ್ಲಮಬಾದ್/ದೆಹಲಿ: ಜಮ್ಮು ಕಾಶ್ಮೀರ, ಭಯೋತ್ಪಾದನೆ, ವ್ಯಾಪಾರ ಮತ್ತು ಧರ್ಮಗಳ ಕುರಿತು ಮಾತುಕತೆಯನ್ನು ಆರಂಭಿಸಲು ಪಾಕ್ ಸಜ್ಜಾಗಿದೆ ಎಂದಿರುವ ಇಮ್ರಾನ್ ಖಾನ್. ಸೆಪ್ಟಂಬರ್ 14ರಂದು ಪ್ರಧಾನಿ ಮೋದಿಯವರನ್ನು ಮೋದಿ ಸಾಹೇಬ್ ಎಂದು ಉಲ್ಲೇಖಿಸಿ ಪತ್ರ ಬರೆದಿದ್ದಾರೆ. ವ್ಯಾಪಾರ, ಜನರ ನಡುವೆ ಸಂಬಂಧ, ಧಾರ್ಮಿಕ ಪ್ರವಾಸ ಮತ್ತು ಮಾನವೀಯ ವಿಷಯಗಳ ಕುರಿತು ಮಾತನಾಡುವ ಪ್ರಸ್ತಾವನೆಯನ್ನು ಅವರು ಇಟ್ಟಿದ್ದಾರೆ.

ದ್ವಿಪಕ್ಷೀಯ ಮಾತುಕತೆಯನ್ನು ಮತ್ತೆ ಆರಂಭಿಸುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಈ ಹೊಸ ಪ್ರಸ್ತಾವನೆ ಇಟ್ಟಿದ್ದಾರೆ. ಅಮೆರಿಕದ ನ್ಯೂಯಾರ್ಕ್​​ನಲ್ಲಿ ಇದೇ ತಿಂಗಳ ಕಡೆಯ ವಾರದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕ್ ವಿದೇಶಾಂಗ ಸಚಿವ ಷಾ ಮೆಹ್ಮೂದ್​ ಖುರೇಶಿ ನಡೆಸಲಿರುವ ಸಭೆ ಕುರಿತು ಪರಿಶೀಲಿಸುವಂತೆ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಎರಡು ದೇಶಗಳ ನಡುವೆ ಅರ್ಥಪೂರ್ಣ ಹಾಗೂ ರಚನಾತ್ಮಕ ಮೈತ್ರಿಯಾಗುವುದನ್ನು ಬಯಸುತ್ತೇನೆ ಎಂಬ ನರೇಂದ್ರ ಮೋದಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಉಭಯ ದೇಶಗಳ ನಡುವೆ ದ್ವಿಪಕ್ಷೀಯವಾಗಿ ಸಮಗ್ರ ಮಾತುಕತೆ ನಡೆಸಲು 2015ರಲ್ಲಿ ಯತ್ನ ನಡೆದಿತ್ತು. ಆದರೆ ಪಠಾಣ್ ಕೋಟ್​ ದಾಳಿ ಪ್ರಕರಣದ ನಂತರ ಮಾತುಕತೆಗೆ ತಡೆಯಾಗಿತ್ತು. ಇನ್ನಾದರೂ ಎರಡೂ ರಾಷ್ಟ್ರಗಳು ಮಾತುಕತೆ ಮೂಲಕ ಕಾಶ್ಮೀರದ ಸಮಸ್ಯೆ ಮತ್ತು ಭಿನ್ನಾಬಿಪ್ರಾಯಗಳನ್ನು ಪರಿಹರಿಸಕಯ ಮುಂದಾಗಬೇಕು ಎಂದು ಅವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉಭಯ ದೇಶಗಳ ನಡುವಿನ ಹಲವು ಮಹತ್ವದ ಒಪ್ಪಂದಗಳು ಹಾಗೂ ಯೋಜನೆಗಳ ವಿಷಯವನ್ನು ಕೂಡ ಇಮ್ರಾನ್ ಖಾನ್ ಉಲ್ಲೇಖಿಸಿದ್ದಾರೆ. ಇಂತಹ ಎಲ್ಲ ಸಮಸ್ಯೆಗಳನ್ನೂ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಯಾವ ನಡೆ ಇಡಲಿದೆ ಎಂಬ ಕುತೂಹಲ ಸದ್ಯಕ್ಕೆ ಮೂಡಿದೆ.

ಮಾಜಿ ಪ್ರಧಾನಿ ವಾಜಪೇಯಿಯವರು ದ್ವಿಪಕ್ಷೀಯ ಮಾತುಕತೆಯ ವಿಷಯದಲ್ಲಿ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದರು. ಇದರಿಂದಾಗಿ ಉಭಯ ದೇಶಗಳ ನಡುವೆ ಮಾತುಕತೆಗೆ ವೇದಿಕೆ ನಿರ್ಮಾಣವಾಗಲು ದೊಡ್ಡ ಕೊಡುಗೆ ಸಿಕ್ಕಿತ್ತು ಎಂದಿರುವ ಅವರು, ಭವಿಷ್ಯದಲ್ಲಿ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಣ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಇಲಾಖೆ, ಪ್ರಧಾನಿ ಮೋದಿಯವರಿಗೆ ಇಮ್ರಾನ್ ಖಾನ್ ಅವರ ಪತ್ರ ಸಕಾರಾತ್ಮಕ ನಡೆ. ಪರಸ್ಪರ ಸಕಾರಾತ್ಮಕ ಭಾವನೆಗಳನ್ನು ವಿನಿಯಮ ಮಾಡಿಕೊಳ್ಳುವ ಯತ್ನ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಣ. ಭಾರತದಿಂದ ಕೂಡ ನಾವು ಇಂತದ್ದೇ ನಡೆಯನ್ನು ನಿರೀಕ್ಷಿಸುತ್ತೇವೆ ಎಂದಿದೆ.

0

Leave a Reply

Your email address will not be published. Required fields are marked *