ಅರುಣಾಚಲ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ತನ್ನಿ: ಟಕಂ ಸಂಜೊಯ್

ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಗೋಹತ್ಯೆಯನ್ನು ಜಾರಿಗೆ ತನ್ನಿ ಎಂದು ಅರುಣಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಟಕಂ ಸಂಜೊಯ್ ಕೇಂದ್ರ ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ. ಗೋ ಮಾರಾಟಕ್ಕೆ ಹೊಸ ನಿಯಮಾವಳಿಗಳನ್ನು ರೂಪಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಹಿಂದುತ್ವದ ಅಜೆಂಡಾವನ್ನು ಜಾರಿಗೊಳಿಸಲು ಯತ್ನಿಸುತ್ತಿದೆ. ಆದರೆ ಈ ನಿರ್ಧಾರದಿಂದ ಹಸುಗಳ ಸಂತತಿ ನಶಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ ಸಬ್​​ಕಾ ಸಾಥ್ ಸಬ್​ಕಾ ವಿಕಾಸ್ ಎಂದರೆ ಬಿಜೆಪಿ – ಆರ್​​ಎಸ್​ಎಸ್​​​ನ ವಿಕಾಸವೇ? ಜನರಿಗೆ ಈ ಘೋಷವಾಕ್ಯವನ್ನು ಅರ್ಥಮಾಡಿಕೊಳ್ಳಲು ಗೋ ಹತ್ಯೆ ಕುರಿತ ನಿಯಮ ಸಕಾಲವನ್ನು ಒದಗಿಸಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಬದಲು ಕೇಂದ್ರದ ಈ ನಿರ್ಧಾರದ ವಿರುದ್ಧ ದೇಶದ ಜನತೆ ನಿಲುವು ತೆಗೆದುಕೊಳ್ಳಬೇಕು ಎಂದು ಕೂಡ ಅವರು ಕರೆ ನೀಡಿದ್ದಾರೆ.

ಅರುಣಾಚಲ ಪ್ರದೇಶದ ಬುಡಕಟ್ಟು ಆಚರಣೆಗಳಲ್ಲಿ ಹಸುವಿನ ಆಹಾರ ಸೇವನೆಯೂ ಪ್ರಮುಖ ಅಂಗ. ಈ ಕುರಿತು ಅರುಣಾಚಲ ಪ್ರದೇಶದ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಮಾಜಿ ರಾಜ್ಯಪಾಲ ಜೆ ಪಿ ರಾಜ್​ಖೋವಾ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಅರುಣಾಚಲ ಪ್ರದೇಶದಲ್ಲಿರುವ ಬಹುತೇಕ ನಾಗರಿಕರು ಮಾಂಸಾಹಾರಿಗಳು. ಈ ಮಾಂಸವನ್ನು ಹೊರಗಿನ ಬುಡಕಟ್ಟು ಮಾರಾಟಗಾರರು ಸರಬರಾಜು ಮಾಡುತ್ತಾರೆ. ಗೋ ಮಾಂಸ ನಿಷೇಧಿಸಿದಲ್ಲಿ ರಾಜ್ಯದ ಜನ ಸಂಕಷ್ಟ ಪರಿಸ್ಥಿತಿಗೆ ಸಿಲುಕಿಕೊಳ್ಳಲಿದ್ದಾರೆ ಎಂದು ಕೂಡ ಅವರು ಆತಂಕ ವ್ಯಕ್ತಪಡಿದ್ದಾರೆ.

ತಮಿಳುನಾಡು ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗೋ ಮಾಂಸ ನಿಷೇಧ ನಿರ್ಧಾರವನ್ನು ಆಮೂಲಾಗ್ರವಾಗಿ ವಿರೋಧಿಸಲಾಗಿದೆ. ಇದು ಜನ ವಿರೋಧಿ ನಿರ್ಧಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೂಡ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗೋ ಮಾಂಸ ಸೇವನೆ ಸಹಜವಾಗಿರುವ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈಶಾನ್ಯ ರಾಜ್ಯಗಳಲ್ಲಿ ಗೋ ಮಾಂಸ ವಿಷಯವನ್ನು ಬಿಜೆಪಿ ಪ್ರಸ್ತಾಪಿಸುತ್ತಿಲ್ಲ. ಮೇಘಾಲಯ, ಅರುಣಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಗೋ ಮಾಂಸವನ್ನು ಅಪಾರ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟಕಂ ಸಂಜೊಯ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *