ಗೋ ಕಿರಿಕಿರಿ: ಬಲಪಂಥೀಯ ವಿದ್ಯಾರ್ಥಿಗಳ ವಿರುದ್ಧ ಚೆನ್ನೈನಲ್ಲಿ ಪ್ರತಿಭಟನೆ

ಚೆನ್ನೈ: ಕೇಂದ್ರ ಸರ್ಕಾರ ಗೋ ಮಾರಾಟಕ್ಕೆ ಹೊಸ ನಿಯಮ ರೂಪಿಸಿರುವುದರ ವಿರುದ್ಧ ಗೋ ಮಾಂಸ ಫೆಸ್ಟ್ ಆಯೋಜಿಸಿ, ಗೋ ಮಾಂಸ ಸೇವಿಸಿದ್ದ ಐಐಟಿ ವಿದ್ಯಾರ್ಥಿ ಮುಖಂಡನ ವಿರುದ್ಧ ಬಲಪಂಥೀಯ ಸಂಘಟನೆಗೆ ಸೇರಿದ ಸದಸ್ಯರು ಹಲ್ಲೆ ನಡೆಸಿದ್ದನ್ನು ವಿರೋಧಿಸಿ, ಇಂದು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನೆರೆದು, ಬಲಪಂಥೀಯರು ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಭಿತ್ತಿಪತ್ರಗಳನ್ನು ಕೂಡ ಪ್ರದರ್ಶಿಸಿದರು. ಕೇಂದ್ರ ಸರ್ಕಾರದ ನೂತನ ಅಧಿಸೂಚನೆ ವಿರೋಧಿಸಿ, ತಮಿಳುನಾಡು ಸೇರಿದಂತೆ ಕರ್ನಾಟಕ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾ ಮೊದಲಾದ ರಾಜ್ಯಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿತ್ತು.

ಐಐಟಿ ವಿದ್ಯಾರ್ಥಿ ಸೂರಜ್ ಮೇಲೆ ನಡೆದಿರುವ ಹಲ್ಲೆ ಕುರಿತು ತನಿಖೆ ನಡೆಸಲು ಸೂಚಿಸಲಾಗಿದೆ. ಎರಡು ದಿನಗಳ ಹಿಂದೆ ಒಟ್ಟು 80 ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇನ್ನು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ಕೂಡ ತಮ್ಮ ಬೆಂಬಗಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್​​ ಹೈಕೋರ್ಟ್​​ನ ಮಧುರೈ ಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದ್ದು, ಕೇಂದ್ರ ಸರ್ಕಾರದ ಅಧಿಸೂಚನೆ 4 ವಾರಗಳವರೆಗೆ ತಡೆ ನೀಡಿದೆ.

ಮೇಘಾಲಯದ ಸಿಎಂ ಮುಕುಲ್ ಸಂಗ್ಮಾ, ಕೇಂದ್ರ ಸರ್ಕಾರ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ, ಮೇಘಾಲಯದಲ್ಲಿ ಬಿಜೆಪಿಯ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಹೊಸ ಅಧಿಸೂಚನೆಗೆ ಸಹಿ ಹಾಕದಂತೆ ಆಗ್ರಹಿಸಿದ್ದಾರೆ.

ದೇಶದಾದ್ಯಂತ ಹೊಸ ಅಧಿಸೂಚನೆಗೆ ಭಾರೀ ಪ್ರತಿಭಟನೆ ಎದುರಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಈ ವಿಷಯದ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಪರಿಸರ ಸಚಿವಾಲಯ ಕೂಡ ಈ ವಿಷಯದಲ್ಲಿ ಪುನರ್​ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು 4 ರಾಷ್ಟ್ರಗಳ ಪ್ರವಾಸದಿಂದ ಹಿಂದಿರುಗಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಮೇಘಾಲಯ ಸಿಎಂ ಮುಕುಲ್ ಸಂಗ್ಮಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜ್ಯಗಳ ಸಿಎಂಗಳು ಈ ಅಧಿಸೂಚನೆಯನ್ನು ವಿರೋಧಿಸಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *