ಮಹಿಳೆಯ ರಕ್ಷಣೆಗೆ ತೆರಳಿದ ತರಬೇತಿ ನಿರತ ಐಎಎಸ್ ಅಧಿಕಾರಿ ಸಾವು

ದೆಹಲಿ: ಪಾರ್ಟಿಯೊಂದರಲ್ಲಿ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ಐಎಎಸ್ ತರಬೇತಿ ಪಡೆಯುತ್ತಿದ್ದ ಅಧಿಕಾರಿ ಸಾವಿಗೀಡಾದ ದುರ್ಘಟನೆ ನಿನ್ನೆ ತಡರಾತ್ರಿ ನವದೆಹಲಿಯಲ್ಲಿ ನಡೆದಿದೆ. 2016ರ ಬ್ಯಾಚ್​​ನ 30ರ ವಯೋಮಾನದ ಆಶಿಶ್ ದಹಿಯಾ ಬಲಿಯಾಗಿದ್ದಾರೆ. ದೆಹಲಿಯ ಬೆರ್ ಸರಾಯಿ ಕ್ಲಬ್​​ನಲ್ಲಿ ಈ ಘಟನೆ ನಡೆದಿದೆ.

ಪಾರ್ಟಿಯಲ್ಲಿ ಮದ್ಯ ಸೇವನೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಕಸ್ಮಿಕವಾಗಿ ಮಹಿಳೆ ಈಜುಕೊಳಕ್ಕೆ ಬಿದ್ದರು.ಮಹಿಳೆಯ ರಕ್ಷಣೆಗೆ ಅವರ ಜೊತೆಯಲ್ಲಿದ್ದ ಬಹುತೇಕ ಅಧಿಕಾರಿಗಳು ಧಾವಿಸಿದರು. ಕಡೆಗೆ ಮಹಿಳಾ ಅಧಿಕಾರಿಯನ್ನು ರಕ್ಷಿಸುವಲ್ಲಿ ಸಫಲರಾದರು. ಆದರೆ, ದಹಿಯಾ ನಾಪತ್ತೆಯಾಗಿದ್ದರು. ಕೆಲ ಕಾಲಾ ನಂತರ ಅವರ ದೇಹ ತೇಲಿದೆ.

ನಂತರ ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, 12:50ರ ವೇಳೆಗೆ ಅಧಿಕಾರಿ ಮಡಿದಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನಂತರ ಅವರ ದೇಹವನ್ನು ಶವಪರೀಕ್ಷೆಗಾಗಿ ಏಮ್ಸ್​​ಗೆ ಕಳುಹಿಸಲಾಗಿದೆ. ಸಾವಿನ ಕುರಿತು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ಕುರಿತು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ಆಹಾರ ಮತ್ತು ಸರಬರಾಜು ಇಲಾಖೆ ಆಯುಕ್ತ ಅನುರಾಗ್ ತಿವಾರಿ ಉತ್ತರಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ. ಇದರ ಬೆನ್ನಲ್ಲೇ ತರಬೇತಿ ಪಡೆಯುತ್ತಿರುವ ಐಎಎಸ್ ಅಧಿಕಾರಿ ಸಾವಿಗೀಡಾಗಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *