ನಾನು ಸಚಿವ, ಇಂಧನ ಬೆಲೆ ಏರಿಕೆ ಬಿಸಿ ತಟ್ಟಿಲ್ಲ: ರಾಂದಾಸ್ ಅಠಾವಳೆ

ಸಚಿವನಾಗಿರುವುರಿಂದ ಬೆಲೆ ಏರಿಕೆ ಬಿಸಿ ತಟ್ಟಿಲ್ಲ
ಸಚಿವ ಸ್ಥಾನ ಕಳೆದುಕೊಂಡರೆ ಬಿಸಿ ತಟ್ಟಬಹದು – ರಾಂದಾಸ್
ಮುಂದುವರೆದ ಇಂಧನ ಬೆಲೆ ಏರಿಕೆ ತಲೆಬಿಸಿ
ದೆಹಲಿಯಲ್ಲಿ ಪೆಟ್ರೋಲ್ ದರ 81.91 ರೂ. (+ 28 ಪೈಸೆ)
ಡೀಸೆಲ್ ದರ 73.72 ( +18 ಪೈಸೆ)
ಮುಂಬೈನಲ್ಲಿ ಪೆಟ್ರೋಲ್ ದರ 89.29 ( + 28ಪೈಸೆ)
ಡೀಸೆಲ್ ದರ 78.26 ( +19 ಪೈಸೆ)

ಜೈಪುರ/ದೆಹಲಿ/ಮುಂಬೈ: ನಾನು ಸಚಿವ, ಇಂಧನ ದರ ಏರಿಕೆಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೇಂದ್ರ ಸಚಿವ ರಾಂದಾಸ್ ಅಠಾವಳೆ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಇಂಧನ ಬೆಲೆ ಏರಿಕೆಯಿಂದ ನನಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ನಾನು ಒಬ್ಬ ಸಚಿವ. ಒಂದು ವೇಳೆ ಸಚಿವ ಸ್ಥಾನ ಕಳೆದುಕೊಂಡರೆ ನನಗೆ ಸಮಸ್ಯೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಅವರು, ಜನ ಇಂಧನ ದರ ಏರಿಕೆಯಿಂದ ಬಳಲುತ್ತಿದ್ದಾರೆ. ಇಂಧನ ಬೆಲೆಯನ್ನು ಇಳಿಸುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೇ, ರಾಜ್ಯಗಳು ತೆರಿಗೆಯನ್ನು ಇಳಿಸಿದರೆ ದರ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂದರು.

ಕಳೆದ ಎರಡು ತಿಂಗಳಿನಿಂದ ಇಂಧನ ದರದಲ್ಲಿ ಸತತವಾಗಿ ಏರಿಕೆಯಾಗುತ್ತಿದ್ದು, ಸೆಪ್ಟಂಬರ್ 10ರಂದು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಭಾರತ್ ಬಂದ್​ಗೆ ಕರೆ ನೀಡಿದ್ದವು. ಆದರೆ, ಇಂದಿನವರೆಗೆ ಪೆಟ್ರೋಲ್ ದರ ಏರಿಕೆಯಾಗುತ್ತಲೇ ಇದೆ. ಈ ನಡುವೆ ತಾವು ಸಚಿವರಾಗಿರುವುದರಿಂದ ಇಂಧನ ಬೆಲೆ ಏರಿಕೆಯ ಬಿಸಿ ನನಗೆ ತಟ್ಟಿಲ್ಲ ಎಂದಿರುವ ಅಠಾವಳೆಯವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ನಡುವೆ ಇಂದು ಕೂಡ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ 81.91 ರೂ. (+ 28 ಪೈಸೆ), ಡೀಸೆಲ್ ದರ 73.72 ( +18 ಪೈಸೆ), ಮುಂಬೈನಲ್ಲಿ ಪೆಟ್ರೋಲ್ ದರ 89.29 ( + 28ಪೈಸೆ), ಡೀಸೆಲ್ ದರ 78.26 ( +19 ಪೈಸೆ) ತಲುಪಿದೆ.

ಇಂಧನ ಬೆಲೆ ಏರಿಕೆ ಕುರಿತ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದ ನಂತರ ಸ್ಪಷ್ಟೀಕರಣ ನೀಡಿದ ರಾಂದಾಸ್, ಪತ್ರಕರ್ತರು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ನನ್ನನ್ನು ಪ್ರಶ್ನಿಸಿದ್ದರು. ಈ ಕುರಿತು ನಿಮಗೆ ಯಾವುದಾದರೂ ಸಮಸ್ಯೆಯಾಗಿದೆಯೇ ಎಂದರು. ಆಗ ನಾನು ನನಗೆ ಯಾವುದೇ ತೊಂದರೆ ಇಲ್ಲ ಎಂದೆ. ನಾನು ಸಚಿವನಾಗಿರುವುದರಿಂದ ನನಗೆ ಸರ್ಕಾರವೇ ವಾಹನವನ್ನು ಒದಗಿಸುತ್ತದೆ. ಆದರೆ, ಜನ ಸಮಸ್ಯೆಯನ್ನು ಎದರಿಸುತ್ತಿದ್ದಾರೆ ಮತ್ತು ದರವನ್ನು ಇಳಿಸಬೇಕು. ನಾನು ಯಾರೊಬ್ಬರನ್ನೂ ಅವಮಾನಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದರು.

ನನ್ನ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ನನಗೆ ಈ ರೀತಿಯ ಯಾವುದೇ ಉದ್ದೇಶ ಇರಲಿಲ್ಲ. ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿದ್ದವನು ಸಚಿವನಾಗಿದ್ದೇನೆ. ನನಗೆ ಜನರ ಸಮಸ್ಯೆ ಗೊತ್ತಿದೆ. ನಾನು ಸರ್ಕಾರದ ಭಾಗವಾಗಿದ್ದೇನೆ ಮತ್ತು ಪೆಟ್ರೋಲ್ – ಡೀಸೆಲ್ ದರವನ್ನು ಇಳಿಸಲು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

0

Leave a Reply

Your email address will not be published. Required fields are marked *