ಭಯೋತ್ಪಾದಕರ 2017ನೇ ಬ್ಯಾಚ್ ಸಿದ್ಧಗೊಳಿಸುತ್ತಿರುವ ಹಿಜ್ಬುಲ್

ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುವ 27 ಕೇಂದ್ರಗಳಿರುವುದಾಗಿ ವರದಿಯಾಗಿದೆ. ಅಲ್ಲದೇ, ಭಯೋತ್ಪಾದಕರನ್ನು ನೇಮಿಸಿಕೊಳ್ಳುವ ನೂತನ ಜಾಲಗಳೇ ಅಸ್ತಿತ್ವದಲ್ಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಕಾಶ್ಮೀರದ ಮುಜಾಫರ್​ಬಾದ್​​ನಲ್ಲಿ 2017ರ ಹೊಸ ಬ್ಯಾಚ್​ನ ಭಯೋತ್ಪಾದಕರನ್ನು ದೇಶದಲ್ಲಿ ಸಿದ್ಧಗೊಳಿಸುತ್ತಿರುವ ಅನುಮಾನ ಕೂಡ ಮೂಡಿದೆ. ಕಳೆದ ಶನಿವಾರ ಹಿಜ್ಬುಲ್ ಮುಜಾಹಿದೀನ್​​​ ಕಮ್ಯಾಂಡರ್ ಬುರ್ಹಾನ್ ವಾನಿಯ ಉತ್ತರಾಧಿಕಾರಿ ಸಬ್ಜರ್ ಅಹಮದ್ ಭಟ್​​ ಮತ್ತು ಇತರ ಏಳು ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು. ಅದರ ನಂತರ ಈ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಲ್ಲಿ ಸೇನಾಪಡೆಗಳಿಗೆ ಉಗ್ರ ಸಂಘಟನೆಗಳು ತಲೆನೋವಾಗಿ ಪರಿಣಮಿಸಿವೆ. ಈ ಗುಂಪುಗಳು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದರ ಮೂಲಕ ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುತ್ತಿವೆ. ಅಲ್ಲದೇ ಈ ಕುರಿತ ವೀಡಿಯೋ ತುಣುಕುಗಳು, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿವೆ. ಈ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ಜಾಹೀರು ಮಾಡುವ ಬೃಹತ್ ಜಾಲ ಕೂಡ ಸೃಷ್ಟಿಯಾಗಿದೆ.

ಕಳೆದ ವರ್ಷ ಹಿಜ್ಬುಲ್ ಮುಜಾಹಿದೀನ್ ಸಂಘಟನೆ 21 ವರ್ಷದ ಬುರ್ಹಾನ್ ವಾನಿಯನ್ನೊಳಗೊಂಡಂತೆ 10 ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆಗೊಳಿಸಿತ್ತು. ಇವರು ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಗಲಭೆಗಳಿಗೆ ಕಾರಣರಾಗಿದ್ದರು. ಇತ್ತೀಚೆಗೆ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾಪಡೆಗಳಿಗೆ ಈ ಕುರಿತ ವೀಡಿಯೋ ಕೂಡ ಲಭ್ಯವಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *