ಪೊಲೀಸ್​​​ನಿಂದಲೇ ಗೃಹಿಣಿಗೆ ಕಿರುಕುಳ

ಮಂಡ್ಯ: ಬೀದಿ ಕಾಮಣ್ಣರ ಕಿರುಕುಳ ಜಾಸ್ತಿಯಾದಾಗ ಮಹಿಳೆಯರು ಪೊಲೀಸರ ಮೊರೆ ಹೋಗಿ ರಕ್ಷಣೆ ಕೇಳ್ತಾರೆ. ಆದರೆ ಈ ಪೋಲೀಸಪ್ಪ ಮಾತ್ರ ತನ್ನ ಬಳಿ ಸಹಾಯ ಕೇಳಿ ಬಂದ ಗೃಹಿಣಿಯನ್ನೇ ಮಂಚಕ್ಕೆ ಕರೆದಿದ್ದಾನೆ. ಜಿಲ್ಲೆಯ ನಾಗಮಂಗಲ ಮೂಲದ ವರಲಕ್ಷ್ಮಿ ಕಳೆದ ಆರು ವರ್ಷದ ಹಿಂದೆ ನಾಗಮಂಗಲದ ಕಿರಣ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ಬೆಂಗಳೂರಿನ ಹೇರೋಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಒಂದೂವರೆ ವರ್ಷದ ಮುದ್ದಾದ ಹೆಣ್ಣು ಮಗು ಕೂಡ ಇತ್ತು. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಕಿರಣ್ ಕಳೆದ ಇಪ್ಪತ್ತು ದಿನಗಳ ಹಿಂದೆ ನನಗೆ ನೀನು ಬೇಡ. ನಾಲ್ಕು ಲಕ್ಷ ಹಣ ತಂದರೆ ಮಾತ್ರ ನಾನು ನಿನ್ನ ಜೊತೆ ಇರುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದ ಇದರಿಂದ ಹೆದರಿದ ವರಲಕ್ಷ್ಮಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಲ್ಲಿ ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗುರುಮೂರ್ತಿ ಎಂಬ ವ್ಯಕ್ತಿ ವರಲಕ್ಷ್ಮಿಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಗೃಹಿಣಿ ಆರೋಪ ಮಾಡುತ್ತಿದ್ದಾರೆ. ಗಂಡನನ್ನು ಹುಡುಕಿಕೊಡಿ ಎಂದು ಸಹಾಯ ಕೇಳಿದರೆ ಪೊಲೀಸ್ ಗುರುಮೂರ್ತಿ ವಾಟ್ಸಪ್‍ಗೆ ನಿರಂತರವಾಗಿ ಕರೆ ಮಾಡುವುದು, ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುವುದು ಮಾಡಿದ್ದಾನೆ. ಜೊತೆಗೆ ತನ್ನ ಮರ್ಮಾಂಗದ ಫೋಟೋ ತೆಗೆದು ವರಲಕ್ಷ್ಮಿಗೆ ಕಳುಹಿಸಿದ್ದಾನೆ. ಇದರಿಂದ ಹೆದರಿದ ಗೃಹಿಣಿ ವರಲಕ್ಷ್ಮಿ ಉಪಾಯವಾಗಿ ಪೋಲೀಸಪ್ಪನ ಪೋಲಿ ಮಾತುಗಳನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಜೊತೆಗೆ ಸಹಾಯ ಕೇಳಿ ಬರುವ ಮಹಿಳೆಯರಿಗೆ ಕಿರುಕುಳ ನೀಡುವ ಪೊಲೀಸರಿಗೆ ಶಿಕ್ಷೆಯಾಗಬೇಕು ಅಂತಿದ್ದಾರೆ. ಬೀದಿ ಕಾಮಣ್ಣರು ಕಿರುಕುಳ ಕೊಟ್ಟರೆ ಪೊಲೀಸರ ಬಳಿ ಹೋಗುತ್ತೇವೆ. ಆದರೆ ರಕ್ಷಣೆ ಮಾಡಬೇಕಾದ ಪೊಲೀಸರೇ ಭಕ್ಷಕರಂತೆ ಮಂಚಕ್ಕೆ ಕರೆದರೆ ಏನು ಮಾಡೋದು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಯತಿಶ್​ಬಾಬು. ಸುದ್ದಿಟಿವಿ, ಮಂಡ್ಯ.

0

Leave a Reply

Your email address will not be published. Required fields are marked *