ಸರ್ಕಾರದ ಜಿಡಿಪಿ ಪ್ರಗತಿ ಕುರಿತು ಅನುಮಾನ ವ್ಯಕ್ತಪಡಿಸಿದ ಆರ್ಥಿಕ ತಜ್ಞರು

ಭಾರತ ಸರ್ಕಾರ ನೀಡಿದ ಜಿಡಿಪಿ ವರದಿ ಉತ್ಪ್ರೇಕ್ಷಿತ ಎಂದ ಆರ್ಥಿಕ ತಜ್ಞರು ಹೇಳಿದ್ದೇನು?

ರಫ್ತು ಮತ್ತು ಆಮದು ವಹಿವಾಟುಗಳಲ್ಲಿ ಇಳಿಕೆ

ಅಸಂಘಟಿತ ವಲಯದಲ್ಲಿ ನಿರುದ್ಯೋಗ

ಕೈಗಾರಿಕೆಗಳ ಬೆಳವಣಿಗೆಯಲ್ಲಿ ನಿಧಾನಗತಿ

ಬ್ಯಾಂಕ್​ಗಳ ಸಾಲ ನೀಡುವು ಸಾಮರ್ಥ್ಯದಲ್ಲಿ ಕುಸಿತ

ಇನ್ನಿತರ ವಲಯಗಳಲ್ಲಿ ಅಸಂಖ್ಯ ಸಮಸ್ಯೆಗಳು

ವಾಷಿಂಗ್ಟನ್‌: ಜಿಡಿಪಿ ಕುರಿತು ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಉತ್ಪ್ರೇಕ್ಷಿತ ಎಂದು ಭಾರತೀಯ ಮೂಲದ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರ್ಥಿಕ ತಜ್ಞ ವಿಜಯ ಆರ್‌. ಜೋಷಿ ಅಭಿಪ್ರಾಯಪಟ್ಟಿದ್ದಾರೆ. India’s Long Road – The Search for Prosperity ಎಂಬ ತಮ್ಮ ಕೃತಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ 5.5ಕ್ಕೆ ಕುಸಿದಿದೆ. ಆದರೆ, ಸರ್ಕಾರ ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ ಎಂದಿದ್ದಾರೆ.

ರಫ್ತು ಮತ್ತು ಆಮದು ವಹಿವಾಟುಗಳಲ್ಲಿ ಇಳಿಕೆಯಾಗಿದೆ. ಅಸಂಘಟಿತ ವಲಯದಲ್ಲಿ ನಿರುದ್ಯೋಗ ಏರಿಕೆಯಾಗಿದೆ. ಕೈಗಾರಿಕೆಗಳ ಬೆಳವಣಿಗೆ ನಿಧಾನಗತಿಗೆ ಇಳಿದಿದೆ. ಇನ್ನು ಸಾಲ ನೀಡುವುದರಲ್ಲಿ ಕೂಡ ಬ್ಯಾಂಕ್​​ಗಳು ಹಿಂದುಳಿದಿವೆ. ಇದರಂತೆ ದೇಶದ ಅನೇಕ ವಲಯಗಳಲ್ಲಿ ಅಸಂಖ್ಯ ಸಮಸ್ಯೆಗಳು ತಲೆದೋರಿವೆ. ಈ ಎಲ್ಲ ಮಿತಿಗಳ ನಡುವೆ ಶೇ. 7ರಷ್ಟು ಜಿಡಿಪಿ ಸಾಧಿಸುವುದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಭಾರತದ ರಾಷ್ಟ್ರೀಯ ಲೆಕ್ಕಪತ್ರ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಶೇ 7ರಷ್ಟು ಪ್ರಗತಿ ಕಾಣುವುದು ಸಾಧ್ಯ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ದೇಶದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಹೂಡಿಕೆಯ ಪ್ರಮಾಣ ತೀವ್ರವಾಗಿ ಇಳಿಕೆಯಾಗಿದೆ. ಇನ್ನು 2011ರಲ್ಲಿ ಹೂಡಿಕೆ ಪ್ರಮಾಣ ಒಟ್ಟು ಜಿಡಿಪಿಯಲ್ಲಿ ಶೇ 34 – 27ಕ್ಕೆ ಇಳಿಕೆಯಾಗಿದೆ. ಆದ್ದರಿಂದ, ಜಿಡಿಪಿ ಶೇ 7ರ ದರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದಾಗಿ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ನಂಬಲಸಾಧ್ಯ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತದಂತಹ ದೇಶದಲ್ಲಿ ದೀರ್ಘಾವಧಿಯಲ್ಲಿ ವಾರ್ಷಿಕ ಶೇ 7 – 9ರ ದರದಲ್ಲಿ ಅಭಿವೃದ್ಧಿ ದಾಖಲಿಸುವುದು ಕಷ್ಟ. ಇಷ್ಟು ಪ್ರಮಾಣದ ಪ್ರಗತಿ ಸಾಧಿಸಿರುವ ಉದಾಹರಣೆಗಳು ಕೂಡ ಕಡಿಮೆ. ಚೀನಾ, ದಕ್ಷಿಣ ಕೊರಿಯಾ ಮತ್ತು ತೈವಾನ್‌ ಮೊದಲಾದ ಬೆರಳೆಣಿಕೆಯ ದೇಶಗಳು ಮಾತ್ರ ಈ ದರದಲ್ಲಿ ಪ್ರಗತಿ ಸಾಧಿಸಿವೆ ಎಂದು ಕೂಡ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಿಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿದೆ. ಆದರೆ, ಶಿಕ್ಷಣ, ಆರೋಗ್ಯ ವಲಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, ಭಾರತದ ಜಿಡಿಪಿ ಶೇ 7ರ ದರದಲ್ಲಿ ಬೆಳವಣಿಗೆ ದಾಖಲಿಸುತ್ತಿಲ್ಲ. ಸರ್ಕಾರ ಬಿಡುಗಡೆ ಮಾಡಿರುವ ವರದಿ ವಿಶ್ವಾಸಾರ್ಹವಲ್ಲ ಎಂದು ಕೂಡ ಹೇಳಿದ್ದಾರೆ. ಶೇ 7ರ ದರದಲ್ಲಿ ಪ್ರಗತಿ ಕಾಣುತ್ತಿದೆ ಎಂಬ ವಿಷಯವನ್ನು ನನ್ನನ್ನೂ ಒಳಗೊಂಡಂತೆ ಅನೇಕ ಆರ್ಥಿಕ ತಜ್ಞರು ಒಪ್ಪುವುದಿಲ್ಲ. ಅಂಕಿಅಂಶ ಕಚೇರಿ ನೀಡಿರುವ ಮಾಹಿತಿಯನ್ನು ನಾವು ನಂಬುವುದಿಲ್ಲ ಎಂದಿದ್ದಾರೆ. ಜೊತೆಗೆ ಮೂಲ ವರ್ಷವನ್ನು 2004–05 ರಿಂದ 2011–12ಕ್ಕೆ ಬದಲಿಸಲಾಗಿದೆ. ಈ ಮೂಲಕ ಜಿಡಿಪಿಯಲ್ಲಿ ಪ್ರಗತಿಯಾಗಿರುವುದಾಗಿ ಹೇಳಲಾಗುತ್ತಿದೆ. ಆದರೆ, ವಾಸ್ತವ ಅಭಿವೃದ್ಧಿ ದರವೇ ಬೇರೆ ಎಂದು ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಕಳೆದ ವಾರ ಜಿಡಿಪಿ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ, ಜಿಡಿಪಿಯ ದೇಶ ಶೇ. 7ರ ದರದಲ್ಲಿ ಪ್ರಗತಿ ಸಾಧಿಸಿದೆ ಎಂದಿದ್ದರು. ಈ ಅಂಕಿ ಅಂಶಗಳನ್ನು ವಿರೋಧಿಸಿದ್ದ ಕಾಂಗ್ರೆಸ್, ಸಿಪಿಐ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಕಾಂಗ್ರೆಸ್ ಸಂಸದ ಆನಂದ್ ಶರ್ಮ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೇ, ಕಳೆದ ಹತ್ತು ವರ್ಷಗಳ ಜಿಡಿಪಿ ಕುರಿತು ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು. ಆದರೆ, ಈ ಸವಾಲನ್ನು ಕೇಂದ್ರ ಸರ್ಕಾರವಾಗಲಿ, ಹಣಕಾಸು ಸಚಿವರಾಗಲಿ ಸ್ವೀಕರಿಸಿರಲಿಲ್ಲ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *