ಬೆಂಗಳೂರು: ಸರ್. ಎಂ. ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನ ಪ್ರಯುಕ್ತ ಗೂಗಲ್ ಡೂಡಲ್ ಗೌರವ ಅರ್ಪಿಸಿದೆ. ಅವರ ಫೋಟೋವನ್ನು ಡೂಡಲ್ನಲ್ಲಿ ಹಾಕಲಾಗಿದ್ದು, ಈ ಮೂಲಕ ನಾಡಿನ ಶ್ರೇಷ್ಠ ಇಂಜಿನಿಯರ್ಗೆ ಗೌರವ ಸಲ್ಲಿಸಲಾಗಿದೆ. ದೇಶದಲ್ಲಿ ಸೆಪ್ಟಂಬರ್ 15ಅನ್ನು ಎಂಜಿನಿಯರ್ಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಗೂಗಲ್ ಅವರ ಸೇವೆಯನ್ನು ಮನ್ನಿಸಿ ಗೌರವ ಸಲ್ಲಿಸಿದೆ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸೆಪ್ಟೆಂಬರ್ 15, 1861ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ್ದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ಅವರು, ಮೈಸೂರಿನ ದಿವಾನರಾಗಿ ಕೆಲಸ ನಿರ್ವಹಿಸಿದ್ದಾರೆ. 1884ರಲ್ಲಿ ಮುಂಬೈನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ 1912ರಿಂದ 1918ರವರೆಗೆ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅಂದಿನ ಅರಸರ ಮೀಸಲಾತಿ ಪರ ನಿಲುವನ್ನು ಖಂಡಿಸಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು. ಇಂದಿನ ಕೆಆರ್ಎಸ್ ಅಣೆಕಟ್ಟೆ ನಿರ್ಮಾಣದಲ್ಲಿ ಇವರ ಪಾತ್ರವಿದೆ.
ಮೈಸೂರಿನ ದಿವಾನರಾಗಿದ್ದಾಗ ಅವಧಿಯಲ್ಲೇ ಅವರಿಗೆ ಬ್ರಿಟಿಷ್ ಸರ್ಕಾರ ಪ್ರತಿಷ್ಠಿತ ‘ಸರ್’ ಪದವಿ ನೀಡಿ ಗೌರವಿಸಿದೆ. 1955ರಲ್ಲಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿದೆ. ಅಲ್ಲದೇ, ಈ ಪ್ರತಿಷ್ಠಿತ ಪದವಿ ಪಡೆದ ಮೊದಲ ಕನ್ನಡಿಗರಾಗಿ ವಿಶ್ವೇಶ್ವರಯ್ಯ ಇತಿಹಾಸ ನಿರ್ಮಿಸಿದ್ದಾರೆ.
ಇವರ ಹೆಸರಿನಲ್ಲಿ ಅನೇಕ ದಂತಕತೆಗಳು ಜಾರಿಯಲ್ಲಿದ್ದು, ಬೀದಿ ದೀಪದ ಕೆಳಗೆ ಓದಿ ವಿಶ್ವೇಶ್ವರಯ್ಯ ದೊಡ್ಡ ಸಾಧನೆ ಮೆರೆದರು ಎಂದು ಹೇಳಲಾಗುತ್ತದೆ. ಆದರೆ, ವಾಸ್ತವದಲ್ಲಿ ಅವರು ಓದುತ್ತಿದ್ದ ಅವಧಿಯಲ್ಲಿ ಬೀದಿದೀಪದ ವ್ಯವಸ್ಥೆಯೇ ಇರಲಿಲ್ಲ. ಸ್ವತಃ ಜೋಗ್ ಫಾಲ್ಸ್ ನೋಡಿದ ಅವರು ನೀರು ವ್ಯರ್ಥವಾಗಿ ಹರಿಯುತ್ತಿದೆ ಎಂದು ಉದ್ಘಾರ ತೆಗೆದಿದ್ದರು ಎಂದು ಹೇಳಲಾಗಿದೆ. ನಂತರ ಬೆಂಗಳೂರಿಗೆ 1905ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅವರು ಆಗಲೇ ಇಂಜಿನಿಯರ್ ಪದವಿ ಮುಗಿಸಿ ಸೇವೆ ಸಲ್ಲಿಸುತ್ತಿದ್ದರು.