ಒಣ ಎಲೆಗಳಿಂದ ಸಾವಯವ ಗೊಬ್ಬರ ತಯಾರಿಸುವ ಪೂನಂ ಭಿಡೆ

ತೆಲಂಗಾಣ​: ತೆಲಂಗಾಣದ ಸಿಕಂದರಾಬಾದ್​​ನ ಈ ಹವ್ಯಾಸಿ ತೋಟಗಾರ್ತಿ ಒಣ ಎಲೆಗಳಿಂದ ಗೊಬ್ಬರ ಮಾಡುವುದರಲ್ಲಿ ಪರಿಣತಿ ಪಡೆದಿದ್ದಾರೆ. ಹೌದು ಇವರು ನಗರಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರು ಎಲೆಗಳನ್ನು ಎತ್ತೋ ಕೆಲಸ ಜಾಸ್ತಿ ಆಗುತ್ತೆ ಅನ್ನೋ ಕಾರಣಕ್ಕೆ ಒಣಗಿದ ಎಲೆಗಳಿಗೆ ಬೆಂಕಿ ಹಚ್ಚೋದನ್ನು ನೋಡಿದ್ದರು. ಈ ಒಣಗಿದ ಎಲೆಗಳಿಂದ ಯಾವುದಾದರೂ ಉಪಯುಕ್ತತೆ ಇದೆಯೇ? ಅಂತ ಯೋಚನೆ ಮಾಡಿದರು. ಅದಾದ ನಂತರ ಅವರಿಗೆ ಈ ಒಣಗಿದ ಎಲೆಗಳಿಂದಲೇ ಗೊಬ್ಬರ ಯಾಕೆ ಮಾಡಬಾರದು? ಅನ್ನೋ ಪ್ರಶ್ನೆ ಮೂಡಿತು.

ಹೌದು, 53 ವರ್ಷದ ಪೂನಂ ಭಿಡೆಯವರಿಗೆ ಇಂಥಾ ಪಾಸಿಟಿವ್ ಐಡಿಯಾ ಹೊಳೆದಿತ್ತು. ಒಣಗಿದ ಎಲೆಗಳನ್ನು ತಮ್ಮ ತಾರಸಿಯ ಮೇಲೆ ಸಂಗ್ರಹಿಸೋದಕ್ಕೆ ಶುರು ಮಾಡಿದರು. ಅಚ್ಚರಿಯ ಸಂಗತಿ ಎಂದರೆ ಈಗ ಬೃಹತ್​ ಹೈದರಾಬಾದ್ ನಗರ ಪಾಲಿಕೆ ಪೂನಂ ಅವರ ಯೋಜನೆಯನ್ನು ಗುರುತಿಸಿದೆ. ಅಲ್ಲದೇ, ಅವರ ಮನೆಯನ್ನು ಕಸರಹಿತ ಮನೆ ಎಂದು ಘೋಷಿಸಿದೆ.

ಪೂನಂ ಅವರು ಕಸವನ್ನು ಹಸಿ ಕಸ, ಒಣ ಕಸ ಮತ್ತು ವೈದ್ಯಕೀಯ ಕಸ ಎಂದು ವಿಂಗಡಿಸುತ್ತಾರೆ. ಇವುಗಳನ್ನು ಬೆರೆಸಿ ಗೊಬ್ಬರವನ್ನು ತಯಾರಿಸುತ್ತಿದ್ದಾರೆ. ನಾನು ತೋಟಗಾರಿಕೆಯನ್ನು ಇಷ್ಟಪಡುತ್ತೇನೆ. ನನಗೆ ಟೆರೇಸ್ ಗಾರ್ಡನ್​ ಹವ್ಯಾಸ ನನ್ನ ಸೋದರಿ ಆಶಾ ಅವರಿಂದ ಬಂದ ಬಳುವಳಿ ಎನ್ನುವ ಪೂನಂ, ಟೆರೇಸ್ ಗಾರ್ಡನ್​​ನಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸುವುದು ಹೇಗೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಆರಂಭದಲ್ಲಿ ನಾನು ಆಹಾರೋತ್ಪನ್ನಗಳಿಂದ ಗೊಬ್ಬರ ತಯಾರಿಸುವುದನ್ನು ಅಭ್ಯಾಸಮಾಡಿದೆ. ನಂತರ ಒಣ ಎಲೆಗಳನ್ನು ಬಳಸಿ, ಗೊಬ್ಬರ ತಯಾರಿಸುವುದನ್ನು ಕಲಿತೆ. ನಂತರ ಉತ್ಕೃಷ್ಟ ಗೊಬ್ಬರದಿಂದ ಗಿಡಗಳ ಬೆಳವಣಿಗೆಯಲ್ಲಿ ಅಭಿವೃದ್ಧಿಯಾಗಿರುವುದನ್ನು ಗಮನಿಸಿದೆ ಎಂದು ತಮ್ಮ ಸಾಧನೆಯ ಕುರಿತು ಹೆಮ್ಮೆ ಪಡುತ್ತಾರೆ ಈ ಪೂನಂ.

ಪೂನಂ ಅವರು ಪ್ರತಿದಿನ ಬೆಳಿಗ್ಗೆ ತಮ್ಮ ಸುತ್ತಮುತ್ತ ಒಣಗಿದ ಎಲೆಗಳನ್ನು ಸಂಗ್ರಹಿಸುತ್ತಾರೆ. ನಂತರ ಎಲೆಗಳನ್ನು ಸೂಕ್ಷ್ಮಾಣುಜೀವಿಗಳಿರುವ ಚೀಲದಲ್ಲಿ ಸಂಗ್ರಹಿಸಿಡುತ್ತಾರೆ. ಮಣ್ಣು, ಮೊಸರುಗಳನ್ನು ಒಳಗೊಂಡಂತೆ ಏನನ್ನು ಬೇಕಾದರೂ ಈ ಮಾದರಿಯಲ್ಲಿ ಗೊಬ್ಬರವಾಗಿ ಪರಿವರ್ತಿಸಬಹುದು ಎಂಬುದು ಅವರ ಅನುಭವ.

ಹೀಗೆ ಸಂಗ್ರಹಿಸಿದ ಎಲೆಗಳನ್ನು 24 ಗಂಟೆಗಳ ಕಾಲ ನೆನೆಹಾಕುತ್ತಾರೆ. ಆ ಹೊತ್ತಿಗೆ ಎಲ್ಲ ಎಲೆಗಳಿಗೂ ಸೂಕ್ಷ್ಮಾಣು ಜೀವಿಗಳು ಬೆರೆಯುತ್ತವೆ. ನಂತರ ಮನೆಯ ತಾರಸಿ ಮೇಲೆ ಟ್ರೇಗಳಲ್ಲಿ ಮಿಶ್ರಣವನ್ನು ಇಡುತ್ತಾರೆ. ನಂತರ ಅದಕ್ಕೆ ಮಣ್ಣನ್ನು ಸೇರಿಸಲಾಗುತ್ತದೆ. ಅನಂತರ ಆಹಾರ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ. ನಂತರ ವಿವಿಧ ಪದರಗಳಲ್ಲಿ ಹೀಗೆ ಎಲೆ, ಮಣ್ಣು, ಎಲೆಗಳನ್ನು ಸುರಿಯಲಾಗುತ್ತದೆ. ಇದನ್ನು 10 – 15 ದಿನಗಳ ಕಾಲ ಇಡಲಾಗುತ್ತದೆ.

ಮೂರೇ ವಾರಗಳ ಅವಧಿಯಲ್ಲಿ ಬ್ಯಾಕ್ಟೀರಿಯಾಗಳು ತಮ್ಮ ಕಾರ್ಯವನ್ನು ಆರಂಭಿಸುತ್ತವೆ. ಒಂದು ತಿಂಗಳ ಹೊತ್ತಿಗೆ ಆ ಮಿಶ್ರಣ ಸಂಪೂರ್ಣ ರಾಸಾಯನಿಕ ಮುಕ್ತ ಮತ್ತು ಉತ್ಕೃಷ್ಟ ಸಾವಯವ ಗೊಬ್ಬರವಾಗಿ ಬದಲಾಗಿರುತ್ತದೆ. ಇದನ್ನು ಅಮೃತ ಮಣ್ಣು ಎಂದು ಪೂನಂ ಕರೆಯುತ್ತಾರೆ. ಅಲ್ಲದೇ, ಈ ಗೊಬ್ಬರವನ್ನು ಹಣ್ಣು ಮತ್ತು ಹೂವಿನ ಗಿಡಗಳಿಗೆ ಬಳಸಬಹುದು ಎನ್ನುತ್ತಾರೆ ಪೂನಂ.

ಹೀಗೆ ಗೊಬ್ಬರ ತಯಾರಿಸಲು ಒಂದೆರೆಡು ತಿಂಗಳ ಅವಧಿ ಹಿಡಿಯತ್ತದೆ. ಆದರೆ, ಬೇರಾವ ಗೊಬ್ಬರಕ್ಕಿಂತ ಇದು ಉತ್ಕೃಷ್ಟವಾಗಿರುತ್ತದೆ ಎನ್ನುವುದು ಪೂನಂ ಅವರ ಅನುಭವ. ಆಶಾ ಮತ್ತು ಪೂನಂ ಸೋದರಿಯರು ಹೀಗೆ ಸಾವಯವ ಗೊಬ್ಬರ ತಯಾರಿಕೆಯಲ್ಲೇ ಖುಷಿ ಅನುಭವಿಸುತ್ತಿದ್ದಾರೆ.

ಅಲ್ಲದೇ, ಇನ್ನೊಂದು ಮಹತ್ವದ ಸಂಗತಿ ಎಂದರೆ ಅವರು ತರಕಾರಿಗಳನ್ನು ಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ತಾವು ತಯಾರಿಸಿದ ಉತ್ಕೃಷ್ಟ ಸಾವಯವ ರಸಗೊಬ್ಬರವನ್ನು ಬಳಸಿ ತಮ್ಮ ಮನೆಯ ತಾರಸಿಯ ಮೇಲೆಯೇ ಸಂಪೂರ್ಣ ಸಾವಯವ ಮಾದರಿಯಲ್ಲಿ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ತಾವು ತಯಾರಿಸಿರುವ ಅಮೃತ ಮಣ್ಣಿನಿಂದಾಗಿ ಎರಡರಿಂದ ಮೂರೇ ದಿನಗಳಲ್ಲಿ ಮೊಳಕೆಯೊಡೆಯುತ್ತವೆ ಎನ್ನುತ್ತಾರೆ ಪೂನಂ.

ತಮ್ಮ ಈ ಅನ್ವೇಷಣೆಯಿಂದಾಗಿ ನೆರಹೊರೆಯವರು, ಸಮೀಪದ ಶಾಲೆಗಳು ಮತ್ತು ಬೃಹತ್ ಹೈದರಾಬಾದ್ ನಗರಪಾಲಿಕೆಗಳ ಗಮನವನ್ನೂ ಇವರು ಸೆಳೆದಿದ್ದಾರೆ. ಇವರ ಆಸಕ್ತಿಯನ್ನು ಗುರುತಿಸಿದ ನಗರದ ಪೌರಕಾರ್ಮಿಕರು ತಾವು ಸಂಗ್ರಹಿಸಿದ ಒಣ ಎಲೆಗಳನ್ನು ಸುಡುವ ಬದಲಿಗೆ ಪೂನಂ ಅವರಿಗೆ ನೀಡುತ್ತಾರೆ.

ಅಲ್ಲದೇ, ತಮ್ಮ ಮನೆಯ ಸಮೀಪದ ಶಾಲೆಗಳಿಗೆ ತೆರಳಿ, ಹೋಟೆಲ್ ಮತ್ತು ತೋಟದ ತ್ಯಾಜ್ಯಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವುದನ್ನು ಹೇಳಿಕೊಡುತ್ತಾರೆ. ಈ ಮೂಲಕ ಬೆಳೆದು ನಿಂತ ಮರಗಳಿಂದಲೇ ಗೊಬ್ಬರವನ್ನು ತಯಾರಿಸುವ ಕಲೆಯನ್ನು ಪಸರಿಸುತ್ತಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *