ಮಹಾರಾಷ್ಟ್ರ ರೈತ ಮುಷ್ಕರ: ರೈತರಲ್ಲಿ ಮೂಡಿದ ಭಿನ್ನಾಭಿಪ್ರಾಯ

ಮುಂಬೈ: ಮಹಾರಾಷ್ಟ್ರದಲ್ಲಿ ಸಮರ್ಪಕ ಬೆಂಬಲ ಬೆಲೆ ಮತ್ತು ಸಾಲ ಮನ್ನಾಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯ ವಿಷಯದಲ್ಲಿ ರೈತರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಇಂದು ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ಮಾತುಕತೆ ನಡೆಸಿದ ನಂತರ ಕೆಲವು ರೈತರು ಪ್ರತಿಭಟನೆ ಕೈಬಿಟ್ಟಿರುವುದಾಗಿ ಘೋಷಿಸಿದರು. ಆದರೆ, ಇನ್ನು ಕೆಲವು ರೈತರು ಇಂದು ಕೂಡ ತರಕಾರಿ, ಹಾಲುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ಮುಂದುವರೆಸಿದ್ದಾರೆ.

ಅಲ್ಲದೇ, ನಾಸಿಕ್​​ನಲ್ಲಿ ಕೃಷಿ ಸಚಿವ ಸದ್ಬಾಹು ಖೋಟ್​​ ಅವರ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಸ್ತೆಯ ಕೆಲವು ವೃತ್ತಗಳಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಾಸಿಕ್, ಅಹಮದ್ ನಗರ್, ಪರ್​ಭಾನಿ ಮತ್ತಿತರ ಪ್ರದೇಶಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಪರ್​ಭಾನಿಯಲ್ಲಿ ಬೃಹತ್ ಪ್ರಮಾಣದಲ್ಲಿ ರೈತರು ನೆರೆದಿದ್ದು, ರೈತ ಮುಖಂಡರ ನಿರ್ಧಾರವನ್ನು ತಿರಸ್ಕರಿಸಿ, ರಸ್ತೆಗೆ ಹಾಲು ಸುರಿಯುವ ಮೂಲಕ ಪ್ರತಿಭಟನೆ ಮುಂದುವರೆಸಿದರು. ಅಲ್ಲದೇ, ರಸ್ತೆ ರೋಕೋ ಚಳವಳಿಯನ್ನು ನಡೆಸಿದರು.

ಪುಂತಾಂಬೆ ಗ್ರಾಮದಲ್ಲಿ ರೈತರು ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಕಿಸಾನ್ ಕ್ರಾಂತಿ ಮೋರ್ಚಾದ ಮುಖಂಡರೊಂದಿಗೆ ಆಗಿರುವ ಒಪ್ಪಂದವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಎರಡು ದಿನಗಳಿಂದ ನಡೆದಿದ್ದ ಸಂಧಾನ ಸಭೆ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಇಂದು ಸತತ 4 ಗಂಟೆಗಳ ಕಾಲ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಕಿಸಾನ್ ಕ್ರಾಂತಿ ಮೋರ್ಚಾ ಮುಖಂಡರ ನಡುವೆ ಮಾತುಕತೆ ನಡೆದಿತ್ತು. ನಂತರ ಮುಷ್ಕರವನ್ನು ಹಿಂತೆಗೆದುಕೊಂಡಿರುವುದಾಗಿ ಮುಖಂಡರು ಘೋಷಿಸಿದ್ದರು.

ಕಿಸಾನ್ ಕ್ರಾಂತಿ ಮೋರ್ಚಾಗೆ ಒಟ್ಟು ಇತರ 40 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ಸಂಘಟನೆಗಳು ಜೂನ್ 1ರಂದು ಪ್ರತಿಭಟನೆ ಆರಂಭಿಸಿದ್ದವು. ಸಾಲ ಮನ್ನಾ, ಉಚಿತ ವಿದ್ಯುತ್, ಸೂಕ್ತ ಬೆಂಬಲ ಬೆಲೆ, ನೀರಾವರಿ ಸೌಲಭ್ಯ, 60 ವರ್ಷ ಮೀರಿದ ರೈತರಿಗೆ ಪಿಂಚಣಿ ಮತ್ತು ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೆ ತರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ಅಲ್ಲದೇ, ಸೊಪ್ಪು, ತರಕಾರಿ ಮತ್ತು ಹಣ್ಣು ಸಗಟು ಮಾರಾಟದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿತ್ತು.

ಸಭೆ ನಡೆಯುತ್ತಿದ್ದ ಸಮಯದಲ್ಲೇ, ಮಹಾರಾಷ್ಟ್ರ ಕಿಸಾನ್ ಸಭಾ ಮುಖಂಡ ಕಾಮ್ರೇಡ್ ಅಜಿತ್ ನವಲೆ ಸಭೆಯಿಂದ ಹೊರನಡೆದಿದ್ದರು. ಅಲ್ಲದೇ, ಜೂನ್ 8ರಂದು ಮುಂದಿನ ಕಾರ್ಯತಂತ್ರ ಕುರಿತು ಚರ್ಚಿಸುವ ಸಲುವಾಗಿ ಜೂನ್ 8ರಂದು ರೈತ ಸಮಾವೇಶ ನಡೆಸುವುದಾಗಿ ಅವರು ಹೇಳಿದ್ದಾರೆ. ನಾನು ರಾಜು ಶೆಟ್ಟಿ, ಬಚು ಕಡು, ರಘುನಾಥ್​ ದಾದಾ ಪಾಟೀಲ್ ಅವರೊಂದಿಗೆ ಸಿಎಂ ಫಡ್ನವೀಸ್ ಅವರನ್ನು ಭೇಟಿಯಾದೆ. ಆದರೆ, ಇಂದಿನ ಮಾತುಕತೆಯಲ್ಲಿ ಯಾವುದೇ ಹೊಸ ಭರವಸೆಗಳನ್ನು ನೀಡಿಲ್ಲ ಎಂದರು.
ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ರೈತರನ್ನು ಸಣ್ಣ ಮತ್ತು ಬೃಹತ್ ಎಂದು ವಿಂಗಡಿಸಬಾರದು. ಎಲ್ಲ ರೈತರೂ ಬರದಿಂದ ಬಳಲಿದ್ದಾರೆ. ಬರಪೀಡಿತ ಪ್ರದೇಶದಲ್ಲಿ ನೀರಾವರಿ ವ್ಯವಸಾಯ ಕೂಡ ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿ ತಜ್ಞ ಡಾ. ಬುಧಾಜಿ ರಾವ್​ ಮುಲಿಕ್ ಅವರು, ರೈತ ಮುಖಂಡರು ಪ್ರತಿಭಟನೆ ಹಿಂತೆಗೆದುಕೊಂಡ ಕ್ರಮವನ್ನು ಖಂಡಿಸಿದ್ದಾರೆ. ಅಲ್ಲದೇ, ಸಾಲ ಮನ್ನಾ, ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಮತ್ತು 60 ವರ್ಷ ತುಂಬಿದ ರೈಗರಿಗೆ ವೃದ್ಧಾಪ್ಯವೇತನ ನೀಡುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸುವವರೆಗೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಸ್​ಸಿಪಿ ಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕಿಸಿವೆ. ಕಾಂಗ್ರೆಸ್ಸಿಗ ಅಶೋಕ್ ಚವನ್, ರಾಜ್ಯ ಸರ್ಕಾರಕ್ಕೆ ರೈತರ ಕುರಿತು ಯಾವ ಕಾಳಜಿಯೂ ಇಲ್ಲ. ರೈತರನ್ನು ಸಂವೇದನಾಶೂನ್ಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ತಕ್ಷಣ ಸಾಲ ಮನ್ನಾ ಮಾಡುವಂತೆ ಕೂಡ ವಿಪಕ್ಷಗಳು ಆಗ್ರಹಿಸಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *