ಇವಿಎಂಗಳ ತಿರುಚುವಿಕೆ ಸವಾಲು ಸ್ವೀಕರಿಸಿರುವ ಎನ್​ಸಿಪಿ, ಎಡಪಕ್ಷಗಳು

ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ, ಇಂದು ಚುನಾವಣಾ ಆಯೋಗ ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸಲು ಅವಕಾಶ ನೀಡಿದೆ. ಆಯೋಗ ನೀಡಿರುವ ಸವಾಲನ್ನು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಎಡಪಕ್ಷಗಳು ಸ್ವೀಕರಿಸಿವೆ.

ನವದೆಹಲಿಯಲ್ಲಿ ಎರಡು ಪ್ರತ್ಯೇಕ ಕೋಣೆಗಳಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂದು ಸಾಬೀತು ಪಡಿಸಬೇಕಿದೆ. 4 ಗಂಟೆಗಳ ಅವಧಿಯನ್ನು ಆಯೋಗ ನಿಗದಿಗೊಳಿಸಿದ್ದು, ಈ ಅವಧಿಯೊಳಗೆ ಹ್ಯಾಕ್ ಮಾಡಿ ಸವಾಲನ್ನು ಜಯಿಸಬೇಕಿದೆ.ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿ ವಿರುದ್ಧ ಇವಿಎಂಗಳನ್ನು ತಿರುಚಿರುವ ಗಂಭೀರ ಆರೋಪ ಎದುರಾಗಿತ್ತು. ಬಹುತೇಕ ವಿಪಕ್ಷಗಳು ಈ ಆರೋಪವನ್ನು ಮಾಡಿದ್ದವು. ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಬಿಜೆಪಿಯ ಮಿತ್ರಪಕ್ಷಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಪಕ್ಷಗಳು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಕುರಿತು ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ ಇವಿಎಂಗಳನ್ನು ತಿರುಚುವುದು ಸಾಧ್ಯವಿಲ್ಲ ಎಂದಿತ್ತು.

ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ್ದ ಆಪ್, ವಿಧಾನಸಭೆ ವಿಶೇಷ ಅಧಿವೇಶನ ನಡೆಸಿ, ಇವಿಎಂ ತಿರುಚುವುದು ಸಾಧ್ಯ ಎಂದು ತೋರಿಸಿತ್ತು. ಈ ಘಟನೆಯ ನಂತರ ಸರ್ವಪಕ್ಷ ಸಭೆ ಕರೆದಿದ್ದ ಚುನಾವಣಾ ಆಯೋಗ ಇವಿಎಂಗಳನ್ನು ತಿರುಚುವಂತೆ ಸವಾಲು ಹಾಕಿತ್ತು.ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗಿರುವ ಇವಿಎಂಗಳನ್ನು ತಿರುಚಲಾಗಿದೆ ಎಂದು ಮೊದಲು ಸಾಬೀತುಪಡಿಸಬೇಕು. ಮತ್ತು ಚಲಾವಣೆಯಾದ ಮತಗಳು ನಿರ್ದಿಷ್ಟ ಪಕ್ಷಕ್ಕೆ ಮತ ವರ್ಗಾವಣೆಯಾಗಿರುವುದನ್ನು ಕೂಡ ಸಾಬೀತುಪಡಿಸುವಂತೆ ಆಯೋಗ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದೆ. ಆದರೆ ಕಾರ್ಯಾಚರಣೆ ವೇಳೆ ಮತಯಂತ್ರ ಆಫ್ ಆಗುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

ಪ್ರದೀಪ್ ಮಾಲ್ಗುಡಿ , ನ್ಯಾಷನಲ್ ಡೆಸ್ಕ್ , ಸುದ್ದಿ ಟಿವಿ

0

Leave a Reply

Your email address will not be published. Required fields are marked *