ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಪ್ರತಿಭಟನೆ

ಚೆನ್ನೈ: ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ಮತ್ತು ಕನಿಮೊಳಿ ಕೇಂದ್ರ ಸರ್ಕಾರದ ವಿರುದ್ಧ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದರು. ಕಳೆದ 23ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋ ಮಾರಾಟಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಇನ್ನು ಈ ವೇಳೆ ಬಲಪಂಥೀಯ ಸಂಘಟನೆಯ ವಿದ್ಯಾರ್ಥಿಗಳಿಂದ ಐಐಟಿ ಪಿಎಚ್​​.ಡಿ., ವಿದ್ಯಾರ್ಥಿ ವಿರುದ್ಧ ನಡೆದ ಹಲ್ಲೆಯನ್ನೂ ಖಂಡಿಸಲಾಗಿದೆ.

ಈ ನಡುವೆ ಐಐಟಿ ಮದ್ರಾಸ್​​ನಲ್ಲಿ ಬಾಹ್ಯಾಕಾಶ ಇಂಜಿನಿಯರಿಂಗ್ ವಿಭಾದಲ್ಲಿ ಪಿಎಚ್​.ಡಿ., ಅಧ್ಯಯನ ನಿರತ ವಿದ್ಯಾರ್ಥಿ ಆರ್ ಸೂರಜ್ ಮೇಲೆ ಹಲ್ಲೆ ನಡೆಸಿದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎಬಿವಿಪಿ ಸದಸ್ಯರ ನೇತೃತ್ವದಲ್ಲಿ ಮನೀಷ್ ಎಂಬ ವ್ಯಕ್ತಿ ಸೂರಜ್​ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.

ಮೇ 23ರಂದು ಕೇಂದ್ರ ಸರ್ಕಾರ ಗೋ ಮಾರಾಟ ಕುರಿತು ಹೊರಡಿಸಿದ್ದ ನೂತನ ಅಧಿಸೂಚನೆ ವಿರೋಧಿಸಿ, ಕಳೆದ ಭಾನುವಾರ ಐಐಟಿ ವಿದ್ಯಾರ್ಥಿಗಳು ಗೋ ಮಾಂಸ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ನಡೆಸಿದ 80 ವಿದ್ಯಾರ್ಥಿಗಳ ಪೈಕಿ ಸೂರಜ್​ ವಿರುದ್ಧ ಹಲ್ಲೆ ನಡೆಸಲಾಗಿತ್ತು. ಹಲ್ಲೆ ವೇಳೆ ಸೂರಜ್ ಅವರ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ.

ಸೂರಜ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 341, 323 ಮತ್ತು 506(1)ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೇ ದಾಳಿಗೊಳಗಾದ ಸೂರಜ್ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 341ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ದನಕರುಗಳ ಮಾರಾಟದ ವೇಳೆ ಮಾರಾಟಗಾರರು ಮತ್ತು ಖರೀದಿದಾರರಿಬ್ಬರೂ ಗುರುತಿನ ಚೀಟಿ ಮತ್ತು ಒಡೆತನದ ದಾಖಲೆಗಳನ್ನು ಹೊಂದಿರಬೇಕು. ಹಸು ಕೊಂಡವರು ಕೊಂಡ ದಾಖಲೆಗಳ 5 ಪ್ರತಿಗಳ ಪೈಕಿ ಒಂದು ಪ್ರತಿ ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿ ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕು. ತಲಾ ಒಂದೊಂದು ಪ್ರತಿ ಮಾರಾಟಗಾರ ಹಾಗೂ ಖರೀದಿದಾರರ ಬಳಿ ಇರಬೇಕು ಎಂಬ ತಿದ್ದುಪಡಿಯನ್ನು ತರಲಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *