ದೆಹಲಿ ಪಾಲಿಕೆ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್​

ನವದೆಹಲಿ: ಡೆಂಗ್ಯೂ, ಚಿಕನ್ ಗುನ್ಯಾ ತಡೆ ಕ್ರಮ ಕೈಗೊಳ್ಳುವಲ್ಲಿ ದೆಹಲಿ ಮಹಾನಗರ ಪಾಲಿಕೆಗಳ ವೈಫಲ್ಯದ ಕುರಿತು ದೆಹಲಿ ಹೈಕೋರ್ಟ್​​ ತರಾಟೆಗೆ ತೆಗೆದುಕೊಂಡಿದೆ. ದೆಹಲಿ ಮಹಾನಗರ ಪಾಲಿಕೆಗಳ ನಿಷ್ಕ್ರಿಯತೆ ಕುರಿತು ಕೋಪಗೊಂಡ ಕೋರ್ಟ್, ಜನರಿಂದ ತೆರಿಗೆ ಸಂಗ್ರಹಿಸುವುದರೊಂದಿಗೆ ಸೌಲಭ್ಯಗಳನ್ನು ನೀಡುವಂತೆ ನಗರ ಪಾಲಿಕೆಗಳಿಗೆ ಸೂಚನೆ ನೀಡಿದೆ.

ದೆಹಲಿ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಗುದ್ದಾಟದಿಂದಾಗಿ ದೆಹಲಿಯಲ್ಲಿ ಕಸದ ಸಮಸ್ಯೆ ಉಲ್ಬಣವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಪಾಲಿಕೆಗಳ ಚುನಾವಣೆಯಲ್ಲಿ ಆಪ್ ಪಕ್ಷ ಕಸ, ಚಿಕನ್​​ಗುನ್ಯಾ, ಡೆಂಗ್ಯೂ ಸಮಸ್ಯೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಅಲ್ಲದೇ, ಬಿಜೆಪಿಯನ್ನು ದೆಹಲಿ ಜನತೆ ಗೆಲ್ಲಿಸಿದಲ್ಲಿ, ಚಿಕನ್​​ಗುನ್ಯಾ ಮತ್ತು ಡೆಂಗ್ಯೂ ರೋಗಗಳು ಉಚಿತವಾಗಿ ಸಿಗುತ್ತವೆ ಎಂದಿದ್ದರು. ಆದರೆ, ನಂತರ ನಡೆದಿದ್ದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು. ಆದರೆ, ಸ್ವಚ್ಛತೆ ಕಾಪಾಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.

ನೀವು ದೆಹಲಿಯನ್ನು ಸ್ವಚ್ಛಗೊಳಿಸಿರುವುದಾಗಿ ಪ್ರಮಾಣ ಪತ್ರ ಕೊಟ್ಟಿದ್ದೀರಿ. ಆದರೆ, ಮಾಧ್ಯಮಗಳು ದೆಹಲಿಯ ಕೊಳಕನ್ನು ಪ್ರಸಾರ ಮಾಡುತ್ತಿವೆ. ಕೆಲವು ಪ್ರದೇಶಗಳಲ್ಲಿ 4 ದಿನಗಳಿಗೊಮ್ಮೆ ಕಸ ಸ್ವಚ್ಛಗೊಳಿಸಿಲ್ಲ ಎಂದು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ನಿಮ್ಮ ಸುಳ್ಳು ಪ್ರಮಾಣ ಪತ್ರಗಳ ಆಧಾರದಲ್ಲಿ ನಿಮಗೆ ನ್ಯಾಯಾಂಗ ನಿಂದನೆ ನೊಟೀಸ್ ನೀಡಬೇಕೇ? ಎಂದು ಕೂಡ ಕೋರ್ಟ್ ಕೇಳಿತು.

ಮೇ 16ರಂದು ಸಾರ್ವಜನಿಕರು ದೆಹಲಿಯಲ್ಲಿ ಸ್ವಚ್ಛತೆ ಕೊರತೆ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ, ದೆಹಲಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಕಳೆದ ಜನವರಿಯಿಂದ ಇಲ್ಲಿಯವರೆಗೆ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯೊಂದರಲ್ಲೇ ಚಿಕನ್​​ ಗುನ್ಯಾದ 80 ಮತ್ತು 30 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 9,661 ಜನ ಚಿಕನ್​​ಗುನ್ಯಾ ರೋಗದಿಂದ ನರಳಿದ್ದರು. 2015ರಲ್ಲಿ 16,000 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಇವರ ಪೈಕಿ 60 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್​​​, ಪಾಲಿಕೆಗಳು ಮತ್ತು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *