ಜಾಮಿಯಾ ಮಸೀದಿಯಲ್ಲ; ಜಮುನಾ ದೇವಾಲಯ: ವಿನಯ್ ಕಟಿಯಾರ್

ನವದೆಹಲಿ: ದೆಹಲಿಯ ಜಾಮಿಯಾ ಮಸೀದಿ ಈ ಹಿಂದೆ ಜಮುನಾ ದೇವಿ ದೇವಾಲಯವಾಗಿತ್ತು ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ, 6000 ಹಿಂದೂ ಕೇಂದ್ರಗಳನ್ನು ಮೊಘಲರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ ಅವರು, ತಾಜ್ ಮಹಲ್ ಹಿಂದೆ ತೇಜೋಮಹಲ್ ಆಗಿತ್ತು ಎಂದರು. ಈ ಮೂಲಕ ಸಂಘ ಪರಿವಾರದ ಹಳೆ ವಾದಗಳನ್ನು ಪುನರುಚ್ಛರಿಸಿದರು.

ನಮ್ಮ ಧಾರ್ಮಿಕ ಸ್ಥಳಗಳು ಮುಸ್ಲಿಮರಿಂದ ದಾಳಿಗೊಳಗಾಗಿವೆ. ಆದರೆ, ನಾವು ರಾಮ ಜನ್ಮಭೂಮಿ ಮತ್ತು ಕಾಶಿಯ ಬಾಬಾ ಬಿಸ್ವಂತ್ ಮಂದಿರ ಹಾಗೂ ಮಥುರಾದ ಕೃಷ್ಣ ಜನ್ಮಭೂಮಿಯನ್ನು ಮಾತ್ರ ಕೇಳುತ್ತಿದ್ದೇವೆ. ಇದುವರೆಗೆ ನಾವು ಕೇವಲ ರಾಮಮಂದಿರವನ್ನು ರಾಮಜನ್ಮಭೂಮಿಯಲ್ಲಿ ನಿರ್ಮಿಸಲು ಬಯಸಿದ್ದೇವೆ ಎಂದಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಕೃಷ್ಣ ಮತ್ತು ಬಿಸ್ವಂತ್ ಮಂದಿರಗಳನ್ನೂ ನಿರ್ಮಿಸಲು ಹೋರಾಟ ಮಾಡುವ ಸುಳಿವನ್ನೂ ಅವರು ನೀಡಿದಂತಾಗಿದೆ.

ಕಪಿಲ್ ಸಿಬಲ್ ವಿರುದ್ಧ ವಾಗ್ದಾಳಿ ನಡೆಸಿದ ಕಟಿಯಾರ್, ಕಾಂಗ್ರೆಸ್ ಮಸೀದಿ ನಿರ್ಮಿಸಲು ಬಯಸುತ್ತದೆ. ಆದರೆ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು. ಅಲ್ಲದೇ, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನವನ್ನು ಮುಂದುವರೆಸಿದಲ್ಲಿ, ನಾವು ಎಲ್ಲ 6,000 ಧಾರ್ಮಿಕ ಸ್ಥಳಗಳ ಒಡೆತನಕ್ಕಾಗಿ ಹಕ್ಕು ಮಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡಿಸೆಂಬರ್ 5ರಂದು ಸುಪ್ರೀಂ ಕೋರ್ಟ್​​ನಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರಣೆ ವೇಳೆ ಜುಲೈ 2019ರವರೆಗೆ ವಿಚಾರಣೆಯನ್ನು ಮುಂದೂಡಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದ್ದರು. ಅಲ್ಲದೇ, ಈ ವಿಚಾರ ರಾಜಕೀಯವಾಗಿ ಪ್ರಭಾವ ಬೀರಬಲ್ಲದು ಎಂದು ವಾದಿಸಿದ್ದರು. ಈ ಕುರಿತ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 8, 2018ಕ್ಕೆ ಮುಂದೂಡಿತ್ತು. ಈ ನಡುವೆ ಕಳೆದ ಎರಡು ದಿನಗಳಿಂದ ಪರಸ್ಪರರ ಮೇಲೆ ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆಯ ಸುರಿಯುತ್ತಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *