ಹೊಲಗಳಿಗೆ ಹೋದ್ರೆ ಕರೆಂಟ್​ ಹೊಡೆಯುತ್ತೆ…!

ಅವ್ರೆಲ್ಲಾ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಈಗಾಗಲೇ ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಅಳಿದುಳಿದ ಜಮೀನನನ್ನೇ ನಂಬಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಆದ್ರೆ ಹೊಲಗಳಿಗೆ ಹೋದ್ರೆ, ಕರೆಂಟ್ ಶಾಕ್ ಹೊಡೀತಿದೆ. ಇದ್ರಿಂದ ರೈತರು ಕಂಗಾಲಾಗಿದ್ದಾರೆ. ಇದು ವಿಜಯಪುರ ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ರೈತರ ಕಥೆ-ವ್ಯಥೆ. ಸ್ಥಾವರ ನಿರ್ಮಾಣಕ್ಕೆ ರೈತರು ಸಾವಿರಾರು ಎಕರೆ ಜಮೀನನ್ನು ಕಳೆದು ಕೊಂಡ್ರು. ಫಲವತ್ತಾದ ನೀರಾವರಿ ಜಮೀನು ಕಳೆದುಕೊಂಡು ರೈತರು ಉಳಿದ 4-5 ಎಕರೆ ಜಮೀನಲ್ಲಿ ವ್ಯವಸಾಯ ಮಾಡಿಕೊಂಡಿದ್ರು. ಆದ್ರೀಗ ರೈತರು ಹೋಲಗಳಿಗೆ ಹೋದ್ರೆ ಕರೆಂಟ್ ಶಾಕ್ ಹೊಡೆಯಲು ಆರಂಭಿಸಿದೆ.

ಸ್ಥಾವರದಿಂದ ಧಾರವಾಡದ ನರೇಂದ್ರದ ಪಾವರ್ ಗ್ರಿಡ್ ಗೆ 400 ಮೆಗಾವ್ಯಾಟ್, ಕೋಲ್ಹಾಪುರಕ್ಕೆ 700 ಹಾಗೂ ರಾಮನಗರ ಜಿಲ್ಲೆಯ ಬಿಡದಿಗೆ 700 ಮೆಗಾ ವ್ಯಾಟ್ ಸೇರಿ ಮೂರು ಪವರ್​​ಗ್ರಿಡ್​ಗಳಿಗೆ 1800 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಲು ಹೈಟೆನ್ಷನ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ ರೈತರ ಹೊಲಗಳಲ್ಲಿರುವ ಕಂಬಗಳ ಮೂಲಕ ಪ್ರವಹಿಸ್ತಿದೆಯಂತೆ. ತಗಡಿನ ಮನೆಗಳು, ದನದ ಕೊಟ್ಟಿಗೆಗಳು, ಬೋರ್ ವೆಲ್ ಗಳಲ್ಲಿ ವಿದ್ಯುತ್ ಶಾಕ್ ಹೊಡೀತಿದ್ದು, ರೈತರು ಭಯದಲ್ಲೇ ಬದುಕುವಂತಾಗಿದೆ. ಕೂಡಗಿ, ಗೊಳಸಂಗಿ ಹಾಗೂ ಮುತ್ತಗಿ ಗ್ರಾಮದ ಜಮೀನುಗಳಲ್ಲಿ ಬರೊಬ್ಬರಿ 90ಕ್ಕೂ ಹೆಚ್ಚು ಕಂಬಗಳನ್ನು ಅಳವಡಿಸಲಾಗಿದೆ. ಅದಕ್ಕೆ ಸೂಕ್ತ ಪರಿಹಾರವನ್ನು ಕೂಡ ರೈತರಿಗೆ ನೀಡಿಲ್ಲ. ಒಂದು ಕಂಬ ನಿರ್ಮಿಸಲು 20 ಗುಂಟೆಗೂ ಹೆಚ್ಚು ಜಾಗ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಅವರಿಗೆ ನೆಮ್ಮದಿ ಇಲ್ಲದಂತಾಗಿದೆ. ಜಮೀನಿನಲ್ಲಿ ಮನೆ ಕಟ್ಟಿಕೊಂಡಿರೋ ರೈತರು, ಕರೆಂಟ್ ಶಾಕ್ ಭಯದಿಂದ ಮನೆಯನ್ನೇ ಖಾಲಿ ಮಾಡುವಂತಾಗಿದೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ವ್ಯವಸಾಯ ಮಾಡುವಂತಾಗಿದೆ ಎಂದು ರೈತರು ಗೋಳಾಡ್ತಿದ್ದಾರೆ. ಏನಾದ್ರೂ ಅನಾಹುತ ಆಗುವ ಮುನ್ನ ಸ್ಥಾವರದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ರೈತರ ಅಳಲು ಆಲಿಸಿ, ಈ ವಿದ್ಯುತ್​ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಿದೆ.
ಗುರುರಾಜ್ ಸುದ್ದಿ ಟಿವಿ ವಿಜಯಪುರ

0

Leave a Reply

Your email address will not be published. Required fields are marked *