ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಘ ಪರಿವಾರದ ನಾಯಕರಿಗೆ ಸಂಕಷ್ಟ

ಜಾಮೀನು ಪಡೆದು ಕ್ರಿಮಿನಲ್ ಪಿತೂರಿ ಆರೋಪದ ದೋಷಾರೋಪ ಹೊತ್ತ ನಾಯಕರು
ಸಿಬಿಐ ವಿಶೇಷ ನ್ಯಾಯಾಲಯದಿಂದ ನಿರಂತರ ವಿಚಾರಣೆಯಲ್ಲಿ ಪ್ರಮುಖ ತಿರುವು

ಲಖ್ನೋ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವೆ ಉಮಾ ಭಾರತಿ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ದೋಷಾರೋಪವನ್ನು ಹೊರಿಸಲಾಗಿದೆ. ಇಂದು ವಿಚಾರಣೆ ಆರಂಭಿಸಿದ ಲಖ್ನೋದ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಗಳಿಗೆ 20,000 ರೂ. ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಿದೆ.

1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ವೇಳೆ ತಮ್ಮ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪವನ್ನು ಕೈಬಿಡಬೇಕು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ಆರೋಪಿಗಳು ಸಿಬಿಐ ವಿಶೇಷ ಕೋರ್ಟ್​​ಗೆ ಮನವಿ ಮಾಡಿಕೊಂಡರು. ಜಾಮೀನು ನೀಡಿದ ಕೋರ್ಟ್ ಕ್ರಿಮಿನಲ್ ಪಿತೂರಿ ಆರೋಪ ಕೈಬಿಡುವಂತೆ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.

ಐಪಿಸಿ ಸೆಕ್ಷನ್ 120(ಬಿ), 153, 153ಎ, 295, 295ಎ ಮತ್ತು 505ರ ಅಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ. 20,000 ವೈಯಕ್ತಿಕ ಬಾಂಡ್ ಆಧಾರದಲ್ಲಿ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರಿಗೆ ವಿಚಾರಣೆ ವೇಳೆ ಖುದ್ದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಡೆಸುತ್ತಿದೆ. ಉಳಿದ ಆರೋಪಿಗಳ ವಿಚಾರಣೆಯನ್ನು ಕೂಡ ಕೋರ್ಟ್ ನಡೆಸಲಿದೆ.

ಲಖ್ನೋ ಮತ್ತು ರಾಯ್​​ಬರೇಲಿಗಳಲ್ಲಿ ಅಡ್ವಾಣಿ, ಜೋಷಿ, ಉಮಾ ಹಾಗೂ ಅನಾಮಿಕ ಕರಸೇವಕರ ವಿರುದ್ಧ ನಡೆಯುತ್ತಿದ್ದ ಪ್ರತ್ಯೇಕ ವಿಚಾರಣೆಯನ್ನು ಒಗ್ಗೂಡಿಸಿ, ಸಿಬಿಐ ವಿಶೇಷ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವಂತೆ ಏಪ್ರಿಲ್ 19ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅಲ್ಲದೇ, ಒಂದು ತಿಂಗಳ ಒಳಗೆ ವಿಚಾರಣೆ ಆರಂಭಿಸಬೇಕು, ನಿರಂತರ ವಿಚಾರಣೆ ನಡೆಸಿ, 2 ವರ್ಷಗಳ ಒಳಗೆ ಅಂತಿಮ ತೀರ್ಪು ನೀಡುವಂತೆ ಕೂಡ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಹೊತ್ತಿರುವ ನಾಯಕರ ವಿಚಾರಣೆಯನ್ನು ಸಿಬಿಐ ಕೋರ್ಟ್​​ ನಡೆಸುತ್ತಿದೆ. ಇನ್ನು ವಿಚಾರಣೆಗೂ ಮುನ್ನ ಪ್ರತಿಕ್ರಿಯಿಸಿದ್ದ ಉಮಾ ಭಾರತಿ, ತಾವು ಈ ಪ್ರಕರಣದಲ್ಲಿ ಅಪರಾಧಿಯಲ್ಲ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಾಮೂಹಿಕ ಚಳವಳಿ ಎಂದಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ನಾಯಕರು ಅಮಾಯಕರು. ಅವರು ಈ ಪ್ರಕರಣದಿಂದ ಪಾರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ವಿಚಾರಣೆ ವೇಳೆ ಕೋರ್ಟ್​​ನ ಹೊರಗೆ ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಹಿರಿಯ ನಾಯಕರ ಪರ ಘೋಷಣೆ ಕೂಗಿದ ಘಟನೆ ಕೂಡ ನಡೆಯಿತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *