ಧ್ವನಿಮತದ ಮೂಲಕ ಮೈತ್ರಿ ಸರ್ಕಾರಕ್ಕೆ ಬಹುಮತ…

ರಾಜ್ಯ ಸರ್ಕಾರದ ಅನಿಶ್ಚಿತತೆಯ ಕುರಿತು ಕಳೆದೊಂದು ವಾರದಿಂದ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.. ಕಾಂಗ್ರೆಸ್, ಜೆಡಿಎಸ್​ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದೆ. ಧ್ವನಿಮತದ ಮೂಲಕ ವಿಶ್ವಾಸಮತ ಗೆಲ್ಲುವಲ್ಲಿ ಸಿಎಂ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ತಮ್ಮ ಸರ್ಕಾರ ಎಲ್ಲಾ ಜನರ ಪರವಾಗಿ ಕೆಲಸ ಮಾಡಲಿದೆ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ಇಲ್ಲದೆ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ..

ವಿಧಾನಸಭೆಯಲ್ಲಿ ಸಭಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನೂತನ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸ ಮತ ಸಾಬೀತುಪಡಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.. ಈ ಸದನವು ನನ್ನ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯ ಮಂಡಿಸಿ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ರಚನೆಯ ಅಗತ್ಯತೆ ದೇಶದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಹಿಂದೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಅನುಭವ ತೆರೆದಿಟ್ಟ ಅವರು, ಇದೊಂದು ಕಪ್ಪುಚುಕ್ಕೆ ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ತಪ್ಪಿನ ನಿರ್ಧಾರ. ಇದಕ್ಕಾಗಿ ಅಂದು 150 ಕೋಟಿ ಗಣಿ ಲಂಚದ ಆರೋಪ ಎದುರಿಸಬೇಕಾಯಿತು. ತಮ್ಮ ತಂದೆಯ ರಾಜಕೀಯ ಜೀವನದ ಮೇಲೆ ಕಪ್ಪು ಚುಕ್ಕೆ ಬೀಳುವಂತಾಯಿತು. ಇಂಥಾ ತಪ್ಪು ಸರಿಪಡಿಸಿಕೊಳ್ಳೋದ್ರ ಜೊತೆಗೆ ಜಾತ್ಯಾತೀತ ಶಕ್ತಿಗಳನ್ನು ಬಲಗೊಳಿಸೋ ದೃಷ್ಟಿಯಿಂದ ಕಾಂಗ್ರೆಸ್​ ಜೊತೆ ಸೇರಿ ಅಧಿಕಾರ ರಚನೆ ಮಾಡಿದ್ದೇನೆ. ಸಂವಿಧಾನ ಬದಲಾವಣೆ ಮಾಡುವಂತಹ ಹೇಳಿಕೆ ನೀಡುತ್ತಿರುವ ಪಕ್ಷದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಘೋಷಿಸಿದರು..

ನಾನು ವಚನ ಭ್ರಷ್ಟನಲ್ಲ ಯಾರಿಗೂ ವಿಶ್ವಾಸ ದ್ರೋಹ ಮಾಡಿಲ್ಲ ನನಗೆ ಅಧಿಕಾರ ಮುಖ್ಯ ಅಲ್ಲ. ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಇಲ್ಲಿದ್ದೇನೆ. ಮೈತ್ರಿ ಪಕ್ಷದ ತೀರ್ಮಾನ ತಪ್ಪು ಎಂದು ಭಾವನೆ ಬರಲು ಬಿಡುವುದಿಲ್ಲ. ಈ ನಾಡನ್ನು ಹೊಸತಾಗಿ ಕಟ್ಟಲು ಎಲ್ಲರೂ ಒಟ್ಟಾಗಿ ಸಾಗೋಣ ಎಂದು ಹೇಳಿದರು..ರಾಜ್ಯಪಾಲರ ನಿರ್ಧಾರದಿಂದಾಗಿ ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರದಂತಾ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಇದನ್ನು ತಪ್ಪಿಸಲು ಶಾಸಕರ ರೆಸಾರ್ಟ್​ ಯಾತ್ರೆ ಅನಿವಾರ್ಯವಾಯಿತು ಎಂದು ವಿಶ್ಲೇಷಿಸಿದ ಅವರು, ಉತ್ತರ, ದಕ್ಷಿಣ ಕರ್ನಾಟಕ ಎಂಬ ವಿಂಗಡನೆ ಇಲ್ಲದೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋದಾಗಿ ತಿಳಿಸಿದ್ರು..

ತಮ್ಮ ಸರ್ಕಾರದ ವಿರುದ್ಧ ಯಾವುದೇ ವರ್ಗ, ಸಮಾಜ ತಮಗೆ ಅನ್ಯಾಯ ವಾಯಿತು ಎಂದು ಪ್ರತಿಭಟನೆ ಮಾಡದಂತೆ ಕೆಲಸ ಮಾಡುತ್ತೇನೆ.. ಮಲ್ಲೇಶಿಯಾದಲ್ಲಿ ನಾನು ಬೇನಾಮಿ ಆಸ್ತಿ ಮಾಡಿದ್ದೇನೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಜಾರಿ ನಿರ್ದೇಶನಾಲಯದ ಮೂಲಕ ನನ್ನನ್ನು ಕಟ್ಟಿ ಹಾಕಲು ಪಯತ್ನ ಮಾಡಿದ್ದಾರೆ. ಇಂಥಹ ಬೆದರಿಕೆಗಳಿಗೆ ಜಗ್ಗದೆ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.. ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾಪ ವಿರೋಧಿಸಿ ಸಭಾತ್ಯಾಗ ಮಾಡಿದ್ರು. ಆ ನಂತರ ಧ್ವನಿಮತದ ಮೂಲಕ ಕುಮಾರಸ್ವಾಮಿ ಸರ್ಕಾರ ವಿಶ್ವಾಸಮರ ಸಾಬೀತುಪಡಿಸುವಲ್ಲಿ ಯಶಸ್ವಿಯಾಯ್ತು. ಇದರೊಂದಿಗೆ ಕಳೆದೊಂದು ವಾರದ ರಾಜಕೀಯ ಅನಿಶ್ವಿತತೆಗೆ ತೆರೆ ಬಿತ್ತು.

ಬ್ಯೂರೋ ರಿಪೋರ್ಟ್, ಸುದ್ದಿಟಿವಿ

0

Leave a Reply

Your email address will not be published. Required fields are marked *