ರಿಲೀಸ್​ ಆಯ್ತು ಚಮಕ್​ ಹಾಡುಗಳು

ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ಚಿತ್ರ ಚಮಕ್, ಸೆಟ್ಟೇರಿದಾಗಿನಿಂದಲೂ ಹಂತ ಹಂತವಾಗಿ ಸದ್ದು ಮಾಡುತ್ತಿರುವ ಚಿತ್ರ. ಇದೀಗ ಚಮಕ್​ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ನಗರದ ಇಬಿಸು ಆಡಿಟೋರಿಯಂನಲ್ಲಿ ನಡೆದ ಅದ್ದೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ನಟ ನಟಿಯರ ಜೊತೆಗೆ ಟಾಲಿವುಡ್​ನ ಅರ್ಜುನ್​ ರೆಡ್ಡಿ ಚಿತ್ರದ ಖ್ಯಾತಿಯ ವಿಜಯ ದೇವರಕೊಂಡ ಆಗಮಿಸಿದ್ರು.

ಕಿರಿಕ್​ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಚಿತ್ರದ ಹಾಡನ್ನು ಹಾಡಿದ ವಿಜಯ್​ ದೇವರಕೊಂಡ ನಂತರ ಕನ್ನಡ ಚಿತ್ರದಲ್ಲಿನ ಕಂಟೆಂಟ್​ ಮತ್ತು ಮೇಕಿಂಗ್ ತುಂಬಾ ಚೆನ್ನಾಗಿರುತ್ತೆ ಎಂದರು. ಮಫ್ತಿ ಚಿತ್ರದ ಬಗ್ಗೆಯೂ ಮಾತನಾಡಿದ ವಿಜಯ್​ ದೇವರಕೊಂಡ ಟ್ರೈಲರ್​ ನೋಡಿದೆ ತುಂಬಾ ಚೆನ್ನಾಗಿದೆ ಎಂದರು. ಚಮಕ್​ ಚಿತ್ರದ ಹಾಡುಗಳ ಬಿಡುಗಡೆ ಮಾಡುವ ಮೂಲಕ ಚಿತ್ರ ಸೂಪರ್​ ಹಿಟ್​ ಆಗಲಿ ಎಂದು ಅಭಿನಂದನೆ ಸಲ್ಲಿಸಿದರು. ಚಮಕ್​ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದು, ಈ ಮೊದಲು ಆಪರೇಷನ್​ ಅಲಮೇಲಮ್ಮ ಚಿತ್ರಕ್ಕೂ ಇವರೇ ಸಂಗೀತ ಸಂಯೋಜನೆ ಮಾಡಿದ್ರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಐದು ಹೊಸ ಸಾಹಿತಿಗಳು ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ. ಇದರ ಜೊತೆಗೆ ಚಿತ್ರದ ಮತ್ತೊಂದು ವಿಶೇಷತೆಯೇನೆಂದರೆ ಎಲ್ಲಾ ಹಾಡುಗಳನ್ನು ಕನ್ನಡದ ಗಾಯಕರಿಂದ ಹಾಡಿಸಿರುವುದಾಗಿದೆ.

ಚಮಕ್​ ಚಿತ್ರದಲ್ಲಿ ಗೋಲ್ಡನ್​ ಸ್ಟಾರ್​ಗೆ ಜೋಡಿಯಾಗಿ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಚಮಕ್​ ಚಿತ್ರವನ್ನು ಸಿಂಪಲ್​ ಸುನಿ ನಿರ್ದೇಶನ ಮಾಡಿದ್ದು, ಒಟ್ಟು 62 ದಿನಗಳ ಕಾಲ ಇಟಲಿ, ಉತ್ತರ ಕನ್ನಡ, ಮತ್ತು ಬೆಂಗಳೂರಿನಲ್ಲಿ ಶೂಟ್​ ಮಾಡಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಡಿಸೆಂಬರ್​ 29ರಂದು ಚಿತ್ರ ತೆರೆಮೇಲೆ ಬರಲಿದೆ. ಇನ್ನು ಡಿಸೆಂಬರ್​ 29 ಎಂದರೆ ಗೋಲ್ಡನ್​ ಸ್ಟಾರ್​ ಗಣೇಶ್​ಗೆ ವಿಶೇಷದ ದಿನ. 2006 ಡಿಸೆಂಬರ್​ 29ರಂದು ಮುಂಗಾರು ಮಳೆ ತೆರೆಕಂಡಿತ್ತು ಇದೀಗ 11 ವರ್ಷಗಳ ನಂತರ ಮತ್ತೆ ಅದೇ ತಾರೀಖಿನಂದು ಚಮಕ್​ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಮಕ್ ಚಿತ್ರದ ಎರಡು ಟೀಸರ್​ಗಳು ಸಾಮಾಜಿಕ ಜಾಲತಾಣದಲ್ಲಿ ಸೂಪರ್​ ಹಿಟ್​ ಆಗಿವೆ. ಗೋಲ್ಡನ್​ ಸ್ಟಾರ್​ ಗಣೇಶ್​ ಮತ್ತು ಸಿಂಪಲ್​ ಸುನಿ ಕಾಂಬಿನೇಷನ್ ಎಂದ ಮೇಲೆ ಅಲ್ಲೊಂದು ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ಹಾಗಾಗಿ ಚಮಕ್​ ಚಿತ್ರ ಸಿನಿ ಪ್ರೇಮಿಗಳಿಗೆ ಚಮಕ್​ ನೀಡುತ್ತದೆಯಾ ಎಂಬುದನ್ನು ಚಿತ್ರ ಬಿಡುಗಡೆಯವರೆಗೂ ಕಾಯಬೇಕಿದೆ.

ಹರೀಶ್.ಕೆ.ಗೌಡ, ಫಿಲ್ಮ್​ ಬ್ಯೂರೋ. ಸುದ್ದಿ ಟಿವಿ.

0

Leave a Reply

Your email address will not be published. Required fields are marked *