ಕಾಶ್ಮೀರದಲ್ಲಿ ರಂಜಾನ್ ಪ್ರಯುಕ್ತ ಸೇನಾ ಕಾರ್ಯಾಚರಣೆ ಸ್ಥಗಿತ

ದೆಹಲಿ: ಜಮ್ಮು ಕಾಶ್ಮೀರದಲ್ಲಿ ಪವಿತ್ರ ರಂಜಾನ್ ಆಚರಣೆ ಪ್ರಯುಕ್ತ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆದೇಶ ನೀಡಿದ್ದಾರೆ. ಶಾಂತಿ ಪ್ರಿಯ ಮುಸ್ಲಿಮರು ಶಾಂತಿಯುತ ವಾತಾವರಣದಲ್ಲಿ ರಂಜಾನ್ ಆಚರಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್, ಸಿಂಎ ಮೆಹಬೂಬ ಮುಫ್ತಿಯವರಿಗೆ ಸಂದೇಶ ರವಾನಸಿದ್ದಾರೆ.

ಅನಿವಾರ್ಯ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಲು ಮತ್ತು ಅಮಾಯಕರ ರಕ್ಷಣೆಗಾಗಿ ಭದ್ರತಾಪಡೆಗಳಿಗೆ ಪ್ರತಿ ದಾಳಿ ನಡೆಸುವ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಸರ್ಕಾರ ಎಲ್ಲರಿಂದ ಸಹಕಾರವನ್ನು ಬಯಸುತ್ತದೆ ಮತ್ತು ಮುಸ್ಲಿಂ ಸೋದರ, ಸೋದರಿಯರು ಯಾವುದೇ ತೊಂದರೆಗಳಿಲ್ಲದೇ ರಂಜಾನ್ ಆಚರಣೆ ನಡೆಸಲಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಸ್ಲಾಂ ಧರ್ಮಕ್ಕೆ ಅಂಟಿರುವ ಕೆಟ್ಟ ಹೆಸರನ್ನು ಅಂಚಿಗೆ ಸರಿಸಲು ಈ ಕ್ರಮ ಮುಖ್ಯವಾದುದು ಎಂದಿರುವ ಅವರು, ಅರ್ಥರಹಿತ ಹಿಂಸಾಚಾರ ಮತ್ತು ಭಯೋತ್ಪಾದನೆಗಳನ್ನು ನಿಯಂತ್ರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ, ಶಾಂತಿಯುತ ವಾತಾವರಣ ನಿರ್ಮಿಸಲು ಮುಂದಾಗಿರುವ ಕ್ರಮದಿಂದಾಗಿ ಸುಸ್ಥಿರ ಮಾತುಕತೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಥ ನಿರ್ಧಾರಗಳಿಂದ ದೀರ್ಘಕಾಲೀನವಾಗಿ ಶಾಂತಿ ಸ್ಥಾಪನೆಗೆ ಅವಕಾಶವಾಗಲಿದೆ ಎಂದಿದ್ದಾರೆ.

ಕೇಂದ್ರದ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಗೃಹಮಂತ್ರಿ ರಾಜನಾಥ್ ಸಿಂಗ್ ಮತ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದು ಅಟಲ್​ಜಿಯವರು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಕದನ ವಿರಾಮ ಉಲ್ಲಂಘನೆಗಳನ್ನು ನಿಯಂತ್ರಿಸಲು ಮುಂದಾಗಿದ್ದರು ಎಂದಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *