ಮೋದಿ ಸರ್ಕಾರಕ್ಕೆ ಮುಖಭಂಗ: ಅಲೋಕ್ ವರ್ಮಾ ಮುಂದುವರಿಕೆಗೆ ಸುಪ್ರೀಂ ಕೋರ್ಟ್​ ಆದೇಶ

ಚಿತ್ರ ಕೃಪೆ: ದಿ ವೈರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಿಬಿಐ ನಿರ್ದೇಶಕರನ್ನು ವಜಾಗೊಳಿಸಿ ರಾತ್ರೋರಾತ್ರಿ ತರಾತುರಿಯಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರೆಯಬೇಕು ಎಂದು ಸೂಚಿಸಿದೆ.

ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ಹಾಕಿದೆ. ಈ ಮೂಲಕ ಆಡಳಿತಾರೂಢ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕಿದೆ. ಸಿಬಿಐ ನಿರ್ದೇಶಕರಾಗಿ ಅಧಿಕಾರ ನಡೆಸುತ್ತಿದ್ದ ತಮ್ಮ ವಿರುದ್ಧದ ಆದೇಶವನ್ನು ಸುಪ್ರೀಂ ಕೋರ್ಟ್​ನಲ್ಲಿ ಅಲೋಕ್ ಜಯಿಸಿದಂತಾಗಿದೆ. ವಿಚಾರಣೆ ವೇಳೆ ಮಹತ್ವದ ಅಭಿಪ್ರಾಯ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಅಲೋಕ್ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದ್ದು ತಪ್ಪು ಎಂದಿದೆ.
ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಸುದಕ್ಕೆ ಮೊದಲು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ, ಪ್ರಧಾನಿ ಮತ್ತು ವಿಪಕ್ಷ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಕೇಂದ್ರ ಸರ್ಕಾರ ಚರ್ಚಿಸಬೇಕಿತ್ತು ಎಂದಿರುವ ಕೋರ್ಟ್, ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೂಚನೆ ನೀಡಿದೆ. ಜೊತೆಗೆ, ಅಲೋಕ್ ವರ್ಮಾ ಸದ್ಯಕ್ಕೆ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ. 
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರು ಲಂಚ ಸ್ವೀಕಾರ ಪ್ರಕರಣ ಒಂದರಲ್ಲಿ ಜಗಳ ನಡೆಸಿದ್ದರು. ಸಿಬಿಐ ಅಧಿಕಾರಿಗಳೇ ಪರಸ್ಪರರ ವಿರುದ್ಧ ಆರೋಪ, ಪ್ರತ್ಯಾರೋಪ ಮಾಡಿಕೊಂಡ ನಂತರ ಕೇಂದ್ರ ಸರ್ಕಾರ ಇಬ್ಬರನ್ನೂ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಿತ್ತು. ಅಲ್ಲದೇ ಎಂ.ನಾಗೇಶ್ವರ್ ಅವರಿಗೆ ಸಿಬಿಐ ಹೊಣೆಗಾರಿಕೆಯನ್ನು ವಹಿಸಿತ್ತು.

ರಫೇಲ್ ಅವ್ಯವಹಾರದ ಕುರಿತು ತನಿಖೆ ನಡೆಸಲು ಮುಂದಾಗಿದ್ದ ಸಿಬಿಐ ನಿರ್ದೇಶಕರನ್ನು ಮಧ್ಯರಾತ್ರಿ ಒಂದು ಗಂಟೆಗೆ ವಜಾಗೊಳಿಸಲಾಗಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈಗ ಅವರು ಮತ್ತೆ ಹುದ್ದೆಗೆ ನಿಯೋಜನೆಯಾಗಿದ್ದಾರೆ. ಸ್ವಲ್ಪ ನ್ಯಾಯ ಸಿಕ್ಕಂತಾಗಿದೆ. ಏನಾಗಲಿದೆ ಎಂಬುದನ್ನು ನೋಡೋಣ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾವು ಯಾರೊಬ್ಬರ ವಿರುದ್ಧ ಇಲ್ಲ. ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇಂದಿನ ತೀರ್ಪು ಕೇಂದ್ರ ಸರ್ಕಾರಕ್ಕೆ ಪಾಠ. ಸರ್ಕಾರಿ ಸಂಸ್ಥೆಗಳನ್ನು ಜನರ ವಿರುದ್ಧ ಒತ್ತಡ ಹೇರಿ ಬಳಸಿಕೊಳ್ಳಲಾಗುತ್ತಿದೆ. ನಾಳೆ ಇದೇ ಕ್ರಮವನ್ನು ಇನ್ನೊಬ್ಬರ ಮೇಲೆ ಮಾಡಲಾಗುತ್ತದೆ. ಹಾಗಾದಲ್ಲಿ ಪ್ರಜಾಪ್ರಭುತ್ವದ ಕಥೆ ಏನು? ಎಂದು ಅವರು ಪ್ರಶ್ನಿಸಿದರು.

ಮಧ್ಯರಾತ್ರಿ ಸಿಬಿಐ ನಿರ್ದೇಶಕರನ್ನು ವಜಾಗೊಳಿಸುವ ಮೂಲಕ ಅಲೋಕ್ ವರ್ಮಾ ಅವರಿಗೆ ಕೆಲಸ ಮಾಡಲು ಅವಕಾಶವನ್ನು ನಿರಾಕರಿಸಲಾಗಿತ್ತು. ಈ ಆಪರೇಷನ್ ವಿಫಲವಾಗಿದೆ ಎಂದಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್​​ ತೀರ್ಪಿನಿಂದ ಕೇಂದ್ರ ಸರ್ಕಾರ ಮತ್ತು ಸಿವಿಸಿ ತೆಗೆದುಕೊಂಡಿರುವ ನಿರ್ಧಾರ ಅಸಂವಿಧಾನಿಕ ಎಂಬುದು ಸಾಬೀತಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರ ಸಿವಿಸಿ ಶಿಫಾರಸಿನ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಿತ್ತು ಎಂದಿದ್ದಾರೆ. ಜೊತೆಗೆ, ಇಬ್ಬರೂ ಅಧಿಕಾರಿಗಳು ಪರಸ್ಪರರ ವಿರುದ್ಧ ಆರೋಪ ಮಾಡಿದ್ದರು. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸುಪ್ರೀಂ ಕೋರ್ಟ್ ಹೇಳಿದಂತೆ ನಡೆದುಕೊಳ್ಳಲಾಗುವುದು ಎಂದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *