ಬ್ಲೂವೇಲ್‌ ಗೇಮ್‌ಗೆ ಮೈಸೂರಿನಲ್ಲಿ ಮೊದಲ ಬಲಿ..

ಇಡೀ ಯುವ ಸಮೂಹವನ್ನೇ ತಲ್ಲಣಗೊಳಿಸಿರುವ ಮೋಸ್ಟ್ ಡೆಡ್ಲಿ ಗೇಮ್ ಬ್ಲೂ ವೇಲ್ ಸಾಂಸ್ಕೃತಿಕ ನಗರಿಯಲ್ಲಿ ಪ್ರಥಮ ಬಲಿ ತೆಗೆದುಕೊಂಡಿದೆ. ಬಾಲಕ ಆತ್ಮಹತ್ಯೆ ಮಾಡಿಕೊಂಡ ಒಂದು ವಾರದ ಬಳಿಕ ಈ ಸ್ಫೋಟಕ ಸತ್ಯವನ್ನ ಸುದ್ದಿಟಿವಿ ಬಯಲು ಮಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಮೇಟಗಳ್ಳಿ ಬಡಾವಣೆಯ ನಿವಾಸಿ ಪ್ರಸನ್ನ ಹಾಗೂ ಪ್ರತಿಮಾ ದಂಪತಿಯ ಏಕೈಕ ಪುತ್ರ 17 ವರ್ಷದ ತುಷಾರ್ ಬ್ಲೂವೇಲ್ ಗೇಮ್ ಗೆ ತುತ್ತಾಗಿದ್ದಾನೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 4ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಬಂದ ತುಷಾರ್ ನೇಣಿಗೆ ಶರಣಾಗಿದ್ದ. ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ, ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿದ್ದ ತುಷಾರ್​​ ಸಾವು ಹೆತ್ತವರನ್ನ ಕಂಗಾಲಾಗಿಸಿತ್ತು.

ಆದರೆ ಆತನ ಮೊಬೈಲ್ನಲ್ಲಿ ಬ್ಲೂ ವೇಲ್ ಗೇಮ್ ಆಪ್ಸ್ ಇದ್ದದ್ದು ಖಚಿತವಾಗಿದ್ದರೂ, ಪೋಷಕರು ಪೊಲೀಸರಿಗೆ ದೂರು ನೀಡಿರಲಿಲ್ಲ. ಮೇಟಗಳ್ಳಿ ಪೊಲೀಸರಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದ್ದರೂ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ಸುದ್ದಿ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ತನಿಖೆಗೆ ಆದೇಶಿಸಿದ್ದಾರೆ. ಈ ತನಕ ವಿದ್ಯಾರ್ಥಿಯದು ಸಹಜ ಸಾವು ಎಂದೇ ಭಾವಿಸಿದ್ದೆವು. ಈಗ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದ ವರದಿ ಪಡೆದು ಪರಿಶೀಲಿಸುತ್ತೇವೆ. ಆತ್ಮಹತ್ಯೆಯೇ ಆಗಿದ್ದರೆ ಪೊಲೀಸರು ಯಾಕೆ ಪ್ರಕರಣ ದಾಖಲಿಸಲಿಲ್ಲ ಎಂಬುದನ್ನು ಪರಿಶೀಲಿಸುತ್ತೇನೆ ಅಂತಾ ಭರವಸೆ ನೀಡಿದ್ದಾರೆ.

ಒಂದೆಡೆ ತಮ್ಮ ಮಗ ಯಾಕೆ ಸತ್ತ ಅನ್ನೋ ಗೊಂದಲದಲ್ಲಿ ಪೋಷಕರು ಸಿಲುಕಿದ್ರೆ, ನೆರೆಹೊರೆಯವರು, ಸ್ನೇಹಿತರ ಬಾಯಲ್ಲಿ ಈತನ ಸಾವಿಗೆ ಬ್ಲೂ ವೇಲ್ ಗೇಮ್ ಕಾರಣ ಎಂಬ ಚರ್ಚೆ ನಡೀತಿತ್ತು. ಇನ್ನು ತುಷಾರ್ ಆತ್ಮಹತ್ಯೆ ಕಾಲೇಜಿನ ಪ್ರಾಂಶುಪಾಲರನ್ನು ದಿಗ್ಬ್ರಾಂತಗೊಳಿಸಿತ್ತು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ತುಷಾರ್, ಕ್ರೀಡಾ ಚಟುವಟಿಕೆಗಳಲ್ಲಿ ಯಾವತ್ತೂ ಮುಂದಿರುತ್ತಿದ್ದ. ಬ್ಲೂ ವೇಲ್ ಗೇಮ್​ಗೆ ಬಲಿಯಾಗಿದ್ದಾನಾ ಅನ್ನೋದು ನಮಗೂ ಗೊತ್ತಾಗುತ್ತಿಲ್ಲ ಅಂತಾರೆ ಕಾಲೇಜಿನ ಪ್ರಾಂಶುಪಾಲರು.ಈಗಾಗಲೇ ಬ್ಲೂ ವೇಲ್ ಗೇಮ್ ಸರ್ಚ್ ಮಾಡಿದ್ದರಲ್ಲಿ ಮೈಸೂರಿಗೆ ಮೊದಲ ಸ್ಥಾನವಿದೆ ಎಂಬ ಆತಂಕದ ನಡುವೆ ವಿದ್ಯಾರ್ಥಿನಿಯೊಬ್ಬನ ಆತ್ಮಹತ್ಯೆ ಪ್ರಕರಣ ಸಾಂಸ್ಕೃತಿಕ ನಗರಿಯ ಜನರನ್ನ ಬೆಚ್ಚಿಬೀಳಿಸಿದೆ. ಆದಷ್ಟು ಬೇಗ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಹೊರತರಬೇಕಿದೆ.
ರವಿಪಾಂಡವಪುರ, ಸುದ್ದಿ ಟಿವಿ, ಮೈಸೂರು

 

0

Leave a Reply

Your email address will not be published. Required fields are marked *