ನವದೆಹಲಿ: ಬಿಜೆಪಿಯೇ ದೇಶದ ಅತ್ಯಂತ ದೊಡ್ಡ ವಸೂಲಾಗದ ಸಾಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅಭಿಪ್ರಾಯಟ್ಟಿದ್ದಾರೆ. ಇಂದು ಭಾರತ ಆರ್ಥಿಕ ಪರಿಸ್ಥಿತಿಯ ಸ್ಥಿತಿಗತಿಗಳನ್ನು ಬಿಡುಗಡೆಗೊಳಿಸಿದ ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
2016 – 17ನೇ ಸಾಲಿನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 7.1 ಎಂದು ನಿನ್ನೆ ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಅವರ ವಿರುದ್ಧ ವಾಗ್ದಾಳಿ ನಡೆಸಿದ ಮನು ಸಿಂಘ್ವಿ, ಇಂಥ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಜನತಾ ಪಕ್ಷವೇ ದೇಶದ ಅತ್ಯಂತ ದೊಡ್ಡ ವಸೂಲಾಗದ ಸಾಲ ಎಂಬುದನ್ನು ಸಾಬೀತು ಮಾಡಿದೆ ಎಂದರು.
ಅಲ್ಲದೇ, ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಘರ್ಜಿಸುತ್ತಿದ್ದ ಸಿಂಹ ಈಗ ಗೊರಕೆ ಹೊಡೆಯುತ್ತಿದೆ ಎಂದು ಅವರು ಪರೋಕ್ಷವಾಗಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ನಿನ್ನೆ ರಾಹುಲ್ ಗಾಂಧಿಯವರು ಮೇಕ್ ಇನ್ ಇಂಡಿಯಾ, ರೈತರ ಪರಿಸ್ಥಿತಿ ಮತ್ತು ಅವರ ಅಸಹನೆ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಿಸಬೇಕು ಎಂದು ಕೂಡ ಅವರು ಒತ್ತಾಯಿಸಿದರು.