ನುಗ್ಗೆ ಸೊಪ್ಪಿಗೆ ಎಷ್ಟು ಪವರ್​​​ ಇದೆ ಗೊತ್ತಾ??

ಮಧುಮೇಹವನ್ನು ಒಂದು ಕಾಲದಲ್ಲಿ ಪರಂಗಿಯವರ ಕಾಯಿಲೆ ಎಂದೇ ಗುರುತಿಸಲಾಗುತ್ತಿತ್ತು. ಇಂದು ಮಧುಮೇಹ ಶ್ರೀಮಂತ ಬಲ್ಲಿದನೆಂಬ ಭೇದವಿಲ್ಲದೇ ಎಲ್ಲಾ ವರ್ಗದ ಜನರನ್ನು ಆವರಿಸುತ್ತಿದೆ. ಮಧುಮೇಹಕ್ಕೆ ಸಕ್ಕರೆ ಕಾಯಿಲೆ ಎಂಬ ಅನ್ವರ್ಥನಾಮವೂ ಇದೆ. ಏಕೆಂದರೆ ದೇಹಕ್ಕೆ ಆಹಾರದ ಮೂಲಕ ಒದಗುವ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಅಗತ್ಯವಾದ ಇನ್ಸುಲಿನ್ ಎಂಬ ರಸದೂತವನ್ನು ನಮ್ಮ ಮೇದೋಜೀರಕ ಗ್ರಂಥಿಗಳು ಸ್ರವಿಸಿ ಸಕ್ಕರೆಯನ್ನು ಬಳಸಿಕೊಳ್ಳಲು ನೆರವಾಗುತ್ತವೆ.

ಒಂದು ವೇಳೆ ಇನ್ಸುಲಿನ್ ಉತ್ಪಾದನೆಯಲ್ಲಿ ಕೊರತೆಯಾದರೆ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಹೋದರೆ ಸಕ್ಕರೆ ಬಳಕೆಯಾಗದೇ ಮೂತ್ರದ ಮೂಲಕ ಹೊರಹೋಗುತ್ತದೆ. ನೆಲದಲ್ಲಿರುವ ಈ ಮೂತ್ರವನ್ನು ಇರುವೆಗಳು ಮುತ್ತಿಕೊಳ್ಳುತ್ತಿದ್ದ ಕಾರಣಕ್ಕೇ ಇದಕ್ಕೆ ‘ಸಕ್ಕರೆ ಕಾಯಿಲೆ’ ಎಂಬ ಹೆಸರು ಬಂದಿದೆ. ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲವಾದರೂ ಇದನ್ನು ನಿಯಂತ್ರಿಸುವ ಮೂಲಕ ಉತ್ತಮ ಆರೋಗ್ಯವನ್ನು ಉಳಿಸಿಕೊಂಡು ಹೋಗಲು ಸಾಧ್ಯ. ಈ ಕೆಲಸವನ್ನು ನಮ್ಮ ನೆಚ್ಚಿನ ನುಗ್ಗೆಸೊಪ್ಪು ಅಥವಾ ನುಗ್ಗೆಮರದ ಎಲೆಗಳು ಉತ್ತಮವಾಗಿ ನಿರ್ವಹಿಸುತ್ತವೆ. ಇದರಲ್ಲಿರುವ ಮಧುಮೇಹ-ನಿವಾರಕ ಗುಣ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ನುಗ್ಗೆ ಸೊಪ್ಪನ್ನು ನೈಸರ್ಗಿಕ ಮಧುಮೇಹ ನಿಯಂತ್ರಕವೆಂದೂ ಕರೆಯಬಹುದು.

ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

ಇಂದು ಭಾರತದ ಎಲ್ಲಾ ರಾಜ್ಯಗಳಲ್ಲಿರುವ ಈ ನುಗ್ಗೇಕಾಯಿ ಮೂಲತಃ ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯುವ್ಯ ಭಾರತದ ರಾಜ್ಯಕ್ಕೆ ಸೇರಿದ ಸಸ್ಯವಾಗಿದೆ. ಈ ಮರದ ಎಲ್ಲಾ ಭಾಗಗಳಲ್ಲಿಯೂ ಒಂದಲ್ಲಾ ಒಂದು ಔಷಧೀಯ ಗುಣವಿದ್ದೇ ಇದೆ. ಆದರೆ ಇದರ ಪುಟ್ಟ ಎಲೆಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ವಿಟಮಿನ್ ಬಿ, ಸಿ, ಕೆ, ಬೀಟಾ-ಕ್ಯಾರೋಟೀನ್ ಹಾಗೂ ಪ್ರೋಟೀನ್ ಸಹಿತ ಇನ್ನಿತರ ಪೋಷಕಾಂಶಗಳಿವೆ. ಸಂಶೋಧನೆಗಳ ಮೂಲಕ ನುಗ್ಗೆ ಎಲೆಗಳಲ್ಲಿ ಮಧುಮೇಹ ನಿವಾರಕ ಗುಣಗಳಿರುವುದನ್ನು ಖಚಿತಪಡಿಸಲಾಗಿದೆ. ಅಲ್ಲದೇ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ನಿಯಂತ್ರಣವನ್ನೂ ಪಡೆಯಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ.

 

ನುಗ್ಗೆಸೊಪ್ಪು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ

ನುಗ್ಗೆಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಆಸ್ಕಾರ್ಬಿಕ್ ಆಮ್ಲವಿದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಪ್ರಚೋದನೆ ನೀಡುತ್ತದೆ. ತನ್ಮೂಲಕ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗಲು ನೆರವಾಗುತ್ತದೆ. ಇದರ ಉರಿಯೂತ ನಿವಾರಕ ಗುಣ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಉತ್ತಮವಾಗಿದೆ. Clinical Biochemistry and Nutrition ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಇಲಿಗಳ ಮೇಲೆ ನುಗ್ಗೆಸೊಪ್ಪಿನ ಪೋಷಕಾಂಶಗಳನ್ನು ಪ್ರಯೋಗಿಸಿದಾಗ ಇವುಗಳ ದೇಹದಲ್ಲಿ ಗ್ಲುಕೋಸ್ ತಾಳುವಿಕೆಯ ಕ್ಷಮತೆ ಹೆಚ್ಚಿರುವುದನ್ನು ಗಮನಿಸಲಾಗಿದೆ.

ನುಗ್ಗೆಸೊಪ್ಪಿನ ಉರಿಯೂತ ನಿವಾರಕ ಗುಣ

ಮಧುಮೇಹದ ರೋಗಿಗಳಿಗೆ ರಕ್ತದ ಸಕ್ಕರೆಯ ಮಟ್ಟ ಏರುಪೇರಾಗುವುದು ಮಾತ್ರವೇ ತೊಂದರೆಯಲ್ಲ, ಬದಲಿಗೆ ಮಧುಮೇಹಿಗಳಿಗೆ ಇತರ ಅಂಗಗಳಿಗೆ ಘಾಸಿಯಾಗುವ ಸಂಭವವೂ ಇತರರಿಗಿಂತ ಹೆಚ್ಚೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಮಧುಮೇಹದ ಪರಿಣಾಮವಾಗಿ ಎದುರಾಗುವ ಉರಿಯೂತದ ಪರಿಣಾಮವಾಗಿ ಸೈಟೋಕೈನ್ಸ್ (cytokines) ಎಂಬ ಪ್ರೋಟೀನು. ಈ ಪ್ರೋಟೀನಿಗೆ ಉರಿಯೂತವನ್ನು ಪ್ರಚೋಗಿಸುವ ಗುಣವಿದೆ. ನುಗ್ಗೆಸೊಪ್ಪಿನಲ್ಲಿರುವ ಫಿನೋಲಿಕ್ ಗ್ಲೈಕೋಸೈಡ್ ಎಂಬ ಪೋಷಕಾಂಶ ಉತ್ತಮ ಉರಿಯೂತ ನಿವಾರಕವಾಗಿದ್ದು ಮಧುಮೇಹದ ಪರಿಣಾಮಗಳು ದೇಹದ ಇತರ ಅಂಗಗಳ ಮೇಲಾಗದಂತೆ ರಕ್ಷಿಸುತ್ತದೆ.

ಆಂಟಿ ಆಕ್ಸಿಡೆಂಟ್ ಗುಣ

ಮಧುಮೇಹ ರೋಗಿಗಳ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ (ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳಿಗೆ ಅಂಟಿ ಆಕ್ಸಿಡೆಂಟುಗಳ ಮೂಲಕ ಒಡ್ದುವ ವಿರೋಧ)ವೂ ಹೆಚ್ಚೇ ಇರುತ್ತದೆ. ಇದು ನರಗಳು ಘಾಸಿಗೊಳ್ಳಲು ಕಾರಣವಾಗುತ್ತದೆ. ದೇಹದಲ್ಲಿ ಫ್ರೀ ರ್‍ಯಾಡಿಕಲ್ ಗಳು ಹೆಚ್ಚುತ್ತಿದ್ದಂತೆಯೇ ಇದರ ಪರಿಣಾಮಕ್ಕೆ ಕೆಲವಾರು ಅಂಗಗಳು ನಿಧಾನವಾಗಿ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ನುಗ್ಗೆ ಎಲೆಗಳಲ್ಲಿ ಜೈವಿಕ ಕ್ರಿಯೆ ಉತ್ತಮಗೊಳಿಸುವ ರಾಸಾಯನಿಕಗಳಿದ್ದು ಇವುಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟು ಗುಣವಿದೆ. ಇವು ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ದ ಹೋರಾಡುವ ಮೂಲಕ ಘಾಸಿಯನ್ನು ತಡೆಯುತ್ತವೆ. ಮಧುಮೇಹದ ನಿಯಂತ್ರಣದಲ್ಲಿ ಈ ಗುಣ ಮಹತ್ತರದ್ದಾಗಿದೆ.

ಅಧಿಕ ರಕ್ತದೊತ್ತಡದ ಪರಿಣಾಮ

ಮಧುಮೇಹಿಗಳಿಗೆ ಎದುರಾಗುವ ಇನ್ನೊಂದು ತೊಂದರೆ ಎಂದರೆ ಅಥೆರೋಸ್ಕ್ಲೆರೋಸಿಸ್ (atherosclerosis) ಅಥವಾ ನರಗಳು ಪೆಡಸಾಗುವುದು. ಇದರ ಮೂಲಕ ರಕ್ತವನ್ನು ಕಳುಹಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದ ಅಗತ್ಯವಿದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಹೃದಯದ ತೊಂದರೆ, ಹೃದಯ ಸ್ತಂಭನ ಮೊದಲಾದವುಗಳಿಗೆ ಕಾರಣವಾಗಬಹುದು. ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ಇದು ಮಾರಣಾಂತಿಕವಾಗಬಹುದು.

ನುಗ್ಗೆ ಎಲೆಗಳಲ್ಲಿರುವ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಕಾರಣ ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. Phytotherapy Research ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಎಲೆಗಳ ರಸವನ್ನು ಹಲವು ಪ್ರಾಣಿಗಳಿಗೆ ಕುಡಿಸಿದ ಬಳಿಕ ಅವುಗಳ ರಕ್ತದೊತ್ತಡ ಕಡಿಮೆಯಾಗುತ್ತದೆ.

ತೂಕದ ನಿರ್ವಹಣೆ

ಮಧುಮೇಹಿಗಳಿಗೆ ತಮ್ಮ ರಕ್ತದಲ್ಲಿ ಸಕ್ಕರೆ ಹಾಗೂ ರಕ್ತದೊತ್ತಡವನ್ನು ಮಾತ್ರವೇ ನಿಯಂತ್ರಿಸಿದರೆ ಸಾಲದು, ಬದಲಿಗೆ ದೇಹದ ತೂಕವನ್ನೂ ಹದ್ದುಬಸ್ತಿನಲ್ಲಿಡಬೇಕಾಗುತ್ತದೆ. ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಮಧುಮೇಹಿಗಳಿಗೆ ಹೆಚ್ಚು ಅಗತ್ಯವಾಗಿದ್ದು ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ನುಗ್ಗೆ ಎಲೆಗಳು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ.

ಇದರಲ್ಲಿರುವ ಪ್ರೋಟೀನುಗಳು ಎರಡು ಹೊತ್ತಿನ ನಡುವೆ ಅನಗತ್ಯವಾಗಿ ಹೆಚ್ಚಿನ ಆಹಾರವನ್ನು ಸೇವಿಸುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಈ ಎಲೆಗಳಲ್ಲಿ ಸಕ್ಕರೆಯೇ ಇಲ್ಲದೆ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ನಿತ್ಯದ ಊಟದಲ್ಲಿ ಸಾಕಷ್ಟು ನುಗ್ಗೆಸೊಪ್ಪನ್ನು ಸೇವಿಸುವ ಮೂಲಕ ಹೆಚ್ಚುವರಿ ತೂಕ ಇಳಿಯಲು ಹಾಗೂ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

ಲಿಪಿಡ್ ಪ್ರೊಫೈಲ್ ಮೇಲಿನ ಪರಿಣಾಮ

ಮಧುಮೇಹ ವ್ಯಕ್ತಿಯ ರಕ್ತದ ಪರೀಕ್ಷೆಯ ವಿವರಗಳು ಅಥವಾ ಲಿಪಿಡ್ ಪ್ರೊಫೈಲ್ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಹೆಚ್ಚುವ ಕಾರಣದಿಂದ peroxidation ಎಂಬ ಲಿಪಿಡ್ ಪ್ರಮಾಣ ಹೆಚ್ಚುತ್ತದೆ. ನುಗ್ಗೆ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣದ ಕಾರಣದಿಂದ ಲಿಪಿಡ್ ಪ್ರೊಫೈಲ್ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ಎಲೆಗಳು ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುವ ಗುಣ ಹೊಂದಿವೆ.
ಆದರೆ ಇದರಿಂದ ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುವುದಿಲ್ಲವಾದರೂ ರಕ್ತನಾಳಗಳ ಒಳಗೆ ಕೆಟ್ಟ ಕೊಲೆಸ್ಟ್ರಾಲ್ ಅಂಟಿಕೊಳ್ಳದಂತೆ ತಡೆಯುವ ಮೂಲಕ ಪರೋಕ್ಷವಾಗಿ ರಕ್ತದೊತ್ತಡ ಕಡಿಮೆಯಾಗಲು ಹಾಗೂ ರಕ್ತನಾಳಗಳು ಪೆಡಸಾಗದಂತೆ ತಡೆಯುತ್ತದೆ.

0

Leave a Reply

Your email address will not be published. Required fields are marked *