ಕಳೆದ ನಾಲ್ಕು ವರ್ಷದಿಂದ ನಿರ್ಜೀವವಾಗಿದ್ದ ಪೀಣ್ಯ ಬಸ್ ನಿಲ್ದಾಣಕ್ಕೆ ಮತ್ತೆ ಜೀವ ಬಂದಿದೆ. ಕೆಎಸ್ಆರ್ಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ 60 ಬಸ್ಗಳನ್ನು ಕೆಬಿಎಸ್ನಿಂದ ಪೀಣ್ಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆದ್ರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಕಾರಣ ಬಸ್ ಗಳು ಖಾಲಿ ಖಾಲಿ ಸಂಚರಿಸುತ್ತಿವೆ….ಕಳೆದ ನಾಲ್ಕು ವರ್ಷಗಳಿಂದ ನಿರ್ಜೀವವಾಗಿದ್ದ ಪೀಣ್ಯ ಬಸ್ ನಿಲ್ದಾಣಕ್ಕೆ ಮರುಜೀವ ಬಂದಿದೆ ಎಂದುಕೊಳ್ಳುತ್ತಿರುವಾಗಲೇ ಎರಡೇ ದಿನದಲ್ಲಿ ಕಳೆ ಮಾಯವಾಗಿದೆ. ಕಳೆದ ಗುರುವಾರವಷ್ಟೆ ಕೆಬಿಎಸ್ ನಿಂದ ಪೀಣ್ಯ ಬಸ್ ನಿಲ್ದಾಣಕ್ಕೆ 60 ಬಸ್ಗಳನ್ನು ಮಾತ್ರ ವರ್ಗಾಯಿಸಲಾಗಿತ್ತು.. ರಾಜ್ಯ ಮತ್ತು ಹೊರರಾಜ್ಯದ ನಾನಾ ಭಾಗಗಳಿಗೆ ಸಂಚರಿಸುವ ಐಷಾರಾಮಿ ಬಸ್ಗಳು, ವೇಗದೂತ ಬಸ್ಗಳನ್ನು ಹೊರತುಪಡಿಸಿ, ಉಳಿದ 980 ಬಸ್ ಗಳನ್ನ ಪೀಣ್ಯದ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಮೊದಲಿಗೆ 60 ಬಸ್ಗಳನ್ನು ಸ್ಥಳಾಂತರಿಸಿ, ಕಾರ್ಯಾಚರಣೆ ಗೊಳಿಸಲಾಗುತ್ತಿದ್ರೂ ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದತ್ತ ಮುಖ ಮಾಡುತ್ತಿಲ್ಲ..
ಸರಿ ಸುಮಾರು 40 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾದ ಪೀಣ್ಯ ನಿಲ್ದಾಣವು 2014ರ ಸೆ-10 ರಿಂದ ಕಾರ್ಯಾರಂಭಗೊಂಡಿತು. ಆರಂಭದಲ್ಲಿ 141 ಬಸ್ಗಳನ್ನು ಕೆಬಿಎಸ್ನಿಂದ ಸ್ಥಳಾಂತರಿಸಿ ಕಾರ್ಯಾಚರಣೆಗೊಳಿಸಲಾಯಿತು. ಆನಂತರ 20 ಜಿಲ್ಲೆಗಳಿಗೆ ಸಂಚರಿಸುವ 303 ಬಸ್ಗಳನ್ನು ಪೀಣ್ಯದಲ್ಲೇ ಕಲ್ಪಿಸಲಾಯ್ತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ಮೂರು ಸಾರಿಗೆ ನಿಗಮಗಳಿಗೆ 12 ಕೋಟಿ ರೂ. ನಷ್ಟ ಉಂಟಾದ ಕಾರಣ ಪೀಣ್ಯದಿಂದ ಸಂಚರಿಸುತ್ತಿದ್ದ ಬಸ್ಗಳನ್ನು ಮೆಜೆಸ್ಟಿಕ್ಗೆ ಸ್ಥಳಾಂತರಿಸಲಾಯ್ತು. ಈಗ ಮತ್ತೆ ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ 60 ಬಸ್ಗಳನ್ನ ಪೀಣ್ಯದಿಂದ ಸಂಚಾರ ಆರಂಭಿಸಲಾಗಿದೆ. ಈ ಮಾಹಿತಿ ಪ್ರಯಾಣಿಕರಿಗೆ ತಿಳಿಯದ ಕಾರಣ ಬೆರಳಣಿಕೆಯಷ್ಟು ಮಂದಿ ಮಾತ್ರ ಬಸ್ ನಿಲ್ದಾಣದತ್ತ ಮುಖ ಮಾಡಿದ್ದಾರೆ..ಬಸವೇಶ್ವರ ಬಸ್ ನಿಲ್ದಾಣದ ಸುತ್ತಮುತ್ತಲ ಬಡಾವಣೆಗಳ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಹಾಗೂ ಸಮೀಪದ ಮೆಟ್ರೋ ನಿಲ್ದಾಣಕ್ಕೆ ತೆರಳಲು ಅನುವಾಗುವಂತೆ 2 ಫೀಡರ್ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲಿ ಶೆಲ್ಟರ್ ಗಳಲ್ಲಿ ನಿರ್ಮಿಸಿರುವ ಅಂಗಡಿಯ ಬಾಗಿಲುಗಳು ಮುಚ್ಚಿವೆ.ಒಟ್ಟಿನಲ್ಲಿ ಪೀಣ್ಯ ಬಸ್ ನಿಲ್ದಾಣ ಕೆಎಸ್ ಆರ್ ಟಿ ಸಿಗೆ ತಲೆನೋವಾಗಿದೆ. ಬಸ್ ನಿಲ್ದಾಣದಿಂದ ಬಸ್ ಸೇವೆ ಆರಂಭವಾದರೂ ಪ್ರಯಾಣಿಕರು ಬರುತ್ತಿಲ್ಲ. ಈಗಾಗಲೇ ಕೋಟಿ ಕೋಟಿ ನಷ್ಟ ಅನುಭವಿಸಿರುವ ಕೆ ಎಸ್ ಆರ್ ಟಿಸಿ ಮತ್ತೆ ನಷ್ಟದಲ್ಲಿ ಸಿಲುಕಲಿದೆ……
ಮಂಜುನಾಥ್ ಹೊಸಹಳ್ಳಿ, ಸುದ್ದಿಟಿವಿ ಬೆಂಗಳೂರು.