ಕಲ್ಲಿದ್ದಲು ಅಕ್ರಮ ಗಣಿ ಹಂಚಿಕೆ: ನವೀನ್ ಜಿಂದಾಲ್​ಗೆ ಜಾಮೀನು

ನವದೆಹಲಿ: ಕಲ್ಲಿದ್ದಲು ಗಣಿ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವೀನ್ ಜಿಂದಾಲ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಅಲ್ಲದೇ, ವ್ಯವಹಾರದ ಉದ್ದೇಶಕ್ಕಾಗಿ ವಿದೇಶ ಪ್ರವಾಸಕ್ಕೂ ಅನುಮತಿ ನೀಡಿದೆ. ಈ ಮೂಲಕ ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ನವೀನ್ ಅವರಿಗೆ ತುಸು ನೆಮ್ಮದಿ ಸಿಕ್ಕಿದೆ.

ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯ ಜಾರ್ಖಂಡ್​​ನ ಅಮರ್​ಕೊಂಡ ಮುರ್ಗದಂಗಲ್ ಗಣಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನವೀನ್ ಜಿಂದಾಲ್ ಅವರನ್ನು ಒಳಗೊಂಡಂತೆ ಐವರಿಗೆ ಜಾಮೀನು ಮಂಜೂರು ಮಾಡಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಷರ್ ಜಿಂದಾಲ್ ಸ್ಟೀಲ್ಸ್​​​ನ ಸಲಹೆಗಾರ ಆನಂದ್ ಗೋಯಲ್, ಗುರ್​​ಗಾಂವ್ ಮೂಲದ ಗ್ರೀನ್ ಇನ್ಫ್ರಾ ಸಂಸ್ಥೆಯ ಉಪಾಧ್ಯಕ್ಷ ಸಿದ್ಧಾರ್ಥ್ ಮದ್ರ, ನಿಹಾರ್ ಸ್ಟಾಕ್ಸ್ ಲಿಮಿಟೆಡ್​​ನ ನಿರ್ದೇಶಕ ಬಿ ಎಸ್ ಎನ್ ಸೂರ್ಯನಾರಾಯಣ, ಮುಂಬೈ ಮೂಲದ ಕೆ ಇ ಇಂಟರ್​ನ್ಯಾಷನಲ್ಸ್​​​ನ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಅಗರ್​ವಾಲ್ ಮತ್ತು ಮುಂಬೈನ ಎಸ್ಸಾರ್ ಪವರ್ ಲಿ. ಕಾರ್ಯಕಾರಿ ಮುಖ್ಯಸ್ಥ ಸುಶಿಲ್ ಕುಮಾರ್ ಮರೂ ಅವರಿಗೂ ಜಮೀನು ನೀಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಲಾಗಿದೆ.

ಸಿಬಿಐ ಐಪಿಸಿ ಸೆಕ್ಷನ್ ಅಡಿ ಕ್ರಿಮಿನಲ್ ಪಿತೂರಿ ಮತ್ತು ಮೋಸ ಪ್ರಕರಣಗಳನ್ನು ದಾಖಲಿಸಿದೆ. ಜಿಂದಾಲ್ ಅವರೊಂದಿಗೆ ಮಾಜಿ ಸಚಿವ ದಾಸರಿ ನಾರಾಯಣ ರಾವ್ ಮತ್ತು ಜಾರ್ಖಂಡ್​​ನ ಮಾಜಿ ಸಿಎಂ ಮಧು ಕೋಡಾ ವಿರುದ್ಧ ಕೂಡ ದೂರು ದಾಖಲಾಗಿದೆ.

1993ರಲ್ಲಿ ಕೇಂದ್ರ ಸರ್ಕಾರ 1993 – 2010ರವರೆಗೆ ಖಾಸಗಿಯವರಿಗೆ ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡಿತ್ತು. ಈ ಕುರಿತು 2014ರಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಹಂಚಿಕೆಯನ್ನು ಅಕ್ರಮ ಎಂದಿತ್ತು. ಅಲ್ಲದೇ, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *