ಸೇನಾ ನೇಮಕ ಹಗರಣ: ಸೇನಾಧಿಕಾರಿ 12 ದಿನಗಳ ಕಾಲ ಸಿಬಿಐ ವಶ

ನವದೆಹಲಿ: ಸೇನಾ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ಬಂಧಿತರಾಗಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರಂಗನಾಥನ್ ಸುಬ್ರಮಣಿಯನ್ ಮತ್ತು ಮಧ್ಯವರ್ತಿ ಗೌರವ್ ಕೊಹ್ಲಿ ಅವರನ್ನು 12 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ಸೇನಾಧಿಕಾರಿ ಮತ್ತು ಮಧ್ಯವರ್ತಿಯನ್ನು ಕಳೆದ ವಾರ ಸಿಬಿಐ ಬಂಧಿಸಿತ್ತು. ಅಲ್ಲದೇ, 2 ಲಕ್ಷ ರೂ.ಗಳನ್ನು ಲೆಫ್ಟಿನೆಂಟ್ ಕರ್ನಲ್​​ ಅವರ ಮನೆಯಿಂದ ವಶಪಡಿಸಿಕೊಂಡಿತ್ತು. ಇಬ್ಬರನ್ನೂ ಇಂದು ದೆಹಲಿಯ ಸಿಬಿಐ ವಿಶೇಷ ಕೋರ್ಟ್​​​ನಲ್ಲಿ ಹಾಜರುಪಡಿಸಲಾಯಿತು. ಇನ್ನು ಕೊಹ್ಲಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಜೂನ್ 9ರಂದು ನಡೆಯಲಲಿದೆ.

ಕಳೆದ ಗುರುವಾರ ಸಿಬಿಐ ಈ ಅಧಿಕಾರಿ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಸೆಕ್ಷನ್ 7, 8, 12, 13 (2) ಆರ್​/ಡಬ್ಲ್ಯೂ 13 (1) (ಡಿ) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988 ಮತ್ತು ಐಪಿಸಿ ಸೆಕ್ಷನ್ 120ಬಿ ಅಡಿ ದೂರು ದಾಖಲಾಗಿತ್ತು. ಅಧಿಕಾರಿ ವಿರುದ್ಧ ಕ್ರಿಮಿನಲ್ ಪಿತೂರಿ, ಲಂಚಕ್ಕಾಗಿ ಬೇಡಿಕೆ ಮತ್ತು ಸ್ವೀಕಾರ ಮತ್ತು ಸಾರ್ವಜನಿಕ ಅಧಿಕಾರಿಯಾಗಿ ನೇಮಕದಲ್ಲಿ ಪ್ರಭಾವ ಬೀರಿರುವ ಆರೋಪಗಳನ್ನು ಸಿಬಿಐ ಹೊರಿಸಿದೆ.

ಗೌರವ್ ಕೊಹ್ಲಿ, ಪುರುಷೋತ್ತಮ್ ಮತ್ತಿತರ ಸೇನಾಧಿಕಾರಿಗಳಿಗೆ ವರ್ಗಾವಣೆ ಮತ್ತು ಭಡ್ತಿ ವಿಷಯದಲ್ಲಿ ಸಹಕರಿಸುವುದಾಗಿ ಲೆ. ಕ. ರಂಗನಾಥನ್ ಭರವಸೆ ನೀಡಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ಲಂಚ ಸ್ವೀಕರಿಸಿರುವ ಆರೋಪ ಕೂಡ ಎದುರಾಗಿದೆ. ರಂಗನಾಥನ್, ಮಧ್ಯವರ್ತಿ ಕೊಹ್ಲಿ, ಪುರುಷೋತ್ತಮ್ ಮತ್ತು ಇತರರ ಜೊತೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿರುವ ಆರೋಪ ಕೂಡ ಎದುರಾಗಿದೆ.

ಪುರುಷೋತ್ತಮ್ ಸೇನೆಯಲ್ಲಿ ನೇಮಕ ಮತ್ತು ಭಡ್ತಿ ಕುರಿತು ಸೇನಾಧಿಕಾರಿಗಳೊಂದಿಗೆ ಡೀಲ್ ಮಾಡುತ್ತಿದ್ದ ಎಂದು ಕೂಡ ಆರೋಪಿಸಲಾಗಿದೆ. ವಿವಿಧ ಹುದ್ದೆಗಳ ಮಾಹಿತಿ ಮತ್ತು ಸೇನಾಧಿಕಾರಿಗಳ ಕುರಿತ ಮಾಹಿತಿಯನ್ನು ಗೌರವ್ ಕೊಹ್ಲಿ ಸಂಗ್ರಹಿಸುತ್ತಿದ್ದ. ಸೇನೆಯ ವೈಯಕ್ತಿಕ ವಿಭಾಗದ ಮುಖ್ಯ ಕಚೇರಿಯನ್ನು ಈ ವ್ಯವಹಾರಕ್ಕೆ ದುರ್ಬಳಕೆ ಮಾಡಿಕೊಂಡ ಆರೋಪ ಕೂಡ ಕೇಳಿ ಬಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *