ಪ್ರೇಮ ಬರಹ ಸೆಟ್​​ನಲ್ಲೂ ಆಂಜನೇಯ ಆರಾಧನೆ

ಆ ಕುಟುಂಬಕ್ಕೆ ಆಂಜನೇಯನೆ ಆಸರೆ. ಪ್ರತಿ ದಿನ ಶುರುವಾಗುವ ಅವನ ಸ್ಮರಣೆಯ ಮೂಲಕ, ಪ್ರತಿ ಮಾತು ಮುಗಿಯುವುದು ಅವನ ಸ್ಮರಣೆಯ ಮೂಲಕ. ವಾಯುಪುತ್ರನೇ ಕನಸಿಗೆ ಬರುವಷ್ಟು ಆಪ್ತ ಭಕ್ತನಾತ. ಈ ಇಡೀ ಕುಟುಂಬದ ಯಶಸ್ಸಿಗೆ ರಾಮನ ಭಂಟನ ಆಶೀರ್ವಾದ ಇದ್ದೆ ಇದೇ. ನಿನ್ನೆ ತಾನೇ “ಪ್ರೇಮ ಬರಹ” ಚಿತ್ರಕ್ಕಾಗಿ ಅರ್ಜುನ್ ಸರ್ಜಾ ಅವರು ಆಂಜನೇಯನ ಸನ್ನಿಧಿಯಲ್ಲಿ ಹಾಡೊಂದರ ಚಿತ್ರೀಕರಣ ಮಾಡಿಕೊಂಡರು. ಆ ಹಾಡಿನ ಭಾಗದ ಚಿತ್ರೀಕರಣದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಕುಡಿಗಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಭಾಗವಹಿಸಿದ್ದರು. ಅಷ್ಟೇ ಯಾಕೆ, ತೂಗುದೀಪ ಕುಟುಂಬದ ಕುಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸರ್ಜಾ ಕುಟುಂಬದ ಕುಡಿಗಳಿಗೆ ಸಾಥ್ ನೀಡಿ ನರ್ತಿಸಿದರು.

ಇದೆಲ್ಲವನ್ನೂ ನೀವು ನೋಡಿದ್ದೀರಿ. ಆದರೆ, ನೋಡದ – ನೋಡಿದರೂ ಮರೆತ, ಕೇಳದ – ಕೇಳಿದರೂ ಮರೆತ ವಿಷಯವೊಂದಿದೆ. ಇದು ಅರ್ಜುನ್ ಸರ್ಜಾ ಅವರ ಅಭೂತಪೂರ್ವ ಆಂಜನೇಯ ಸ್ವಾಮಿಯ ಭಕ್ತಿ ಪರಾಕಾಷ್ಠೆಯ ವಿಷಯ. ಇದು ನಡೆದದ್ದು ಹತ್ತು ವರ್ಷಗಳ ಹಿಂದೆ. ಒಮ್ಮೆ ಅರ್ಜುನ್ ಸರ್ಜಾ ಕನಸಿನಲ್ಲಿ ಪ್ರತ್ಯಕ್ಷನಾದ ಆಂಜನೇಯ ಆರ್ಡರ್ ಮಾಡಿದರಂತೆ, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಆದರೆ ನನ್ನ ಮೇಲಿನ ನಿನ್ನ ಭಕ್ತಿಯನ್ನು ಎಲ್ಲರಿಗೂ ಹಂಚಬೇಕು. ಇದಕ್ಕಾಗಿಯೇ ನನ್ನದೊಂದು ಬೃಹತ್ ವಿಗ್ರಹವನ್ನು ಚೆನ್ನೈನಲ್ಲಿ ಸ್ಥಾಪಿಸಬೇಕು. ವಿಗ್ರಹ ಕೆತ್ತನೆಗೆ ಕರ್ನಾಟಕದ ಬೃಹತ್ ಕರಿ ಕಲ್ಲೊಂದು ನಿನಗಾಗಿ ಕಾಯುತ್ತಿದೆ. ಈಗಿಂದೀಗಲೇ ಹೊರಡು. ನಿನಗೆ ಶುಭವಾಗಲಿ…” – ಇದು ಆಂಜನೇಯನ ಆರ್ಡರ್

ಮಾರನೇ ದಿನವೇ ಅರ್ಜುನ್ ಸರ್ಜಾ ಆಂಜನೇಯ ಹೇಳಿದ ಆ ಬೃಹತ್ ಕರಿಕಲ್ಲನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದರು.. ದಾರಿ ನಡುವೆ ಏನೆಲ್ಲಾ ಯೋಚನೆ, ಯೋಜನೆ… ಇದ್ದಕ್ಕಿದ್ದಂತೆಯೇ ಈಜಿಪ್ಟಿನ “ಮಮ್ಮಿ” ನೆನಪಾಯಿತು.. ನೋಡುವವರಿಗೆ ಅದನ್ನು ಯಾರು ನಿರ್ಮಿಸಿದರು ಅಂತ ಗೊತ್ತಿರುವುದಿಲ್ಲ… ಕಾಲನಲ್ಲಿ ಲೀನವಾಗಿರುವ ಆ ಪುಣ್ಯಾತ್ಮನ ಸಾಧನೆ ಸಾರಲು ಈ “ಮಮ್ಮಿ”ಗಳೇ ಸಾಕಲ್ಲವೇ? ಇಂಥಾದ್ದೊಂದು ದೊಡ್ಡ ಸಾಧನೆ ಮಾಡಲೆಂದೇ ಅರ್ಜುನ್ ಸರ್ಜಾ ಹೊರಟಿದ್ದಾರೆ.. ಈಗಾಗಲೇ ಸಿನೆಮಾಗಳಲ್ಲಿ ನಟಿಸಿದ್ದಾಗಿದೆ.. ದುಡ್ಡು ಮಾಡಿಕೊಂಡದ್ದಾಗಿದೆ.. ಹೆಸರು ಕೂಡ ಮಾಡಿಕೊಂಡಾಯಿತು.. ಆದರೆ, ಇದರಲ್ಲೇನಿದೆ ಸಾಧನೆ? ಮುಂದಿನ ಪೀಳಿಗೆಗೆ ನನ್ನ ಸಾಧನೆಯನ್ನು ನೆನಪಿಟ್ಟುಕೊಳ್ಳುವಂಥಾ ಕುರುಹು ಬೇಕೆಂದೆನಿಸಿತು ಸರ್ಜಾಗೆ… ಆಗ ನೆನಪಾದದ್ದೇ ಕನಸಲ್ಲಿ ಬಂದು ಆಂಜನೇಯ ಆರ್ಡರ್ ಮಾಡಿದ ತನ್ನದೇ ವಿಗ್ರಹ.

ಎಷ್ಟು ಕೋಟಿ ಖರ್ಚಾದರೂ ಪರ್ವಾಗಿಲ್ಲ. ಬೃಹತ್ತಾದ ಆಂಜನೇಯನ ಶಿಲ್ಪ ತಯಾರಿಸಲು ಅರ್ಜುನ್ ಸರ್ಜಾ ನಿರ್ಧರಿಸಿದ್ದು ಹೀಗೆ. ಶಿಲ್ಪಿಯ ಹುಡುಕಾಟ ನಡೆಯಿತು. ಶಿಲೆಯ ಹುಡುಕಾಟವೂ ನಡೆಯಿತು. ಮಂಗಳೂರು, ಕಾರ್ಕಳ, ಮೂಡುಬಿದಿರೆ ಮೊದಲಾದ ಜಾಗಗಳಲ್ಲೆಲ್ಲಾ ಅಲೆದಾಡಿದರು. ಯಾರೂ ಸಿಗಲಿಲ್ಲ. ರಂಜಾಳ ಗೋಪಾಲ ಶೆಣೈಯವರ ಬಗ್ಗೆ ಕೇಳಿದ್ದರು. ಬೃಹತ್ತಾದ ಗೋಮಟೇಶ್ವರ ವಿಗ್ರಹವನ್ನು ಕೆತ್ತಿದ ಶಿಲ್ಪಿ ಇವರು… ಇವರ ಪೀಳಿಗೆಯವರೇನಾದರೂ ಸಿಗುತ್ತಾರಾ ಎಂದು ಮತ್ತೆ ಮತ್ತೆ ದಕ್ಷಿಣ ಕನ್ನಡದಾದ್ಯಂತ ಹುಡುಕಾಡಿದರು.. ಸಿಗಲಿಲ್ಲ. ಕೊನೆಗೆ ಅಶೋಕ್ ಗುಡಿಕಾರರೆಂಬ ಮಹಾನ್ ಶಿಲ್ಪಿ ಸಿಕ್ಕರು. ಜೊತೆಗೆ ಶಿಲೆಯೂ ಸಿಕ್ಕಿತು.

ದೊಡ್ಡಬಳ್ಳಾಪುರದ ಬಳಿಯ ಹಳ್ಳಿಯೊಂದರಲ್ಲಿ ಸಿಕ್ಕ ಏಕಶಿಲೆಯೊಂದನ್ನು ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದರು. ಆ ಏಕಶಿಲೆಯನ್ನು ಎತ್ತಿ ನಿಲ್ಲಿಸಲೆಂದೇ 10 ಲಕ್ಷ ಖರ್ಚು ಮಾಡಿದರು.! ಈಗ ನೀವೇ ಹೇಳಿ ವಿಗ್ರಹ ನಿರ್ಮಾಣಕ್ಕೆ ಎಷ್ಟು ಖರ್ಚಾಗಬಹುದೆಂದು? ಸುಮಾರು 17 ಅಡಿ ಅಗಲ, 40 ಅಡಿ ಎತ್ತರದ ಕುಳಿತ ಭಂಗಿಯ ಆಂಜನೇಯನ ವಿಗ್ರಹವದು..

3 ವರ್ಷಗಳ ಕಾಲ ಅಶೋಕ ಗುಡಿಕಾರರು ಆ ಬೃಹತ್ ಏಕಶಿಲಾ ಬಂಡೆಯೊಂದಿಗೆ ಬಡಿದಾಡಿ ಅದ್ಭುತವಾದ ಆಂಜನೇಯನ ವಿಗ್ರಹವನ್ನು ರೆಡಿ ಮಾಡಿದರು. ಮುಂದಿನ ಸಮಸ್ಯೆ ಇದನ್ನು ಚೆನ್ನೈಗೆ ಸಾಗಿಸುವುದು ಹೇಗೆ ಎನ್ನುವುದು. ವಿಗ್ರಹ ಹೊರಲೆಂದೇ ಒಂದು ವಿಶೇಷ ವಾಹನದ ವ್ಯವಸ್ಥೆ ಮಾಡಿದರು ಅರ್ಜುನ್ ಸರ್ಜಾ. ಹೇಗೋ ಕಷ್ಟಪಟ್ಟು ವಿಗ್ರಹವನ್ನು ಸಾಗಿಸಿ ಚೆನ್ನೈನ ಸರ್ಜಾ ಜಮೀನಿನ ಒಂದೆಕರೆ ಜಾಗದಲ್ಲಿ ಪ್ರತಿಷ್ಠಾಪಿಸಲಾಯಿತು…
ಇದೀಗ ಅರ್ಜುನ್ ಸರ್ಜಾ ಕನಸು ನನಸಾಗಿದೆ. ಆಂಜನೇಯನ ವಿಗ್ರಹವನ್ನು ನೋಡಲೆಂದು ಮತ್ತು ಪೂಜಿಸಲೆಂದು ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ.. ಅಲ್ಲಿ ಪ್ರತಿನಿತ್ಯ ಜಾತ್ರೆ. ಈಜಿಪ್ಟಿನ “ಮಮ್ಮಿ”ಯಂತೆ ಮುಂದೊಂದು ದಿನ ಈ ಆಂಜನೇಯನ ವಿಗ್ರಹವನ್ನು ನೋಡುವ ಮುಂದಿನ ಪೀಳಿಗೆ ಅರ್ಜುನ್ ಸರ್ಜಾರ ಈ ಸಾಧನೆಯನ್ನು ಸ್ಮರಿಸುತ್ತಾರೆ..!

ಅಂದಹಾಗೆ, ಸರ್ಜಾ ಕುಟುಂಬದ ಯಾವ ಸದಸ್ಯನೇ ಆದರೂ ಮಾತಿನ ಕೊನೆಯಲ್ಲಿ “ಜೈ ಆಂಜನೇಯ” ಎಂದೆನ್ನುವುದನ್ನು ನೀವು ಗಮನಿಸಿರಬಹುದು. ಇದು ಅರ್ಜುನ್ ಸರ್ಜಾ ಎಫೆಕ್ಟ್!!! ನೆನಪಾಯಿತಾ? ಇದೇ ಅರ್ಜುನ್ ಸರ್ಜಾ ಅವರ ಕನ್ನಡ ಚಿತ್ರದ ಹೆಸರು :”ವಾಯುಪುತ್ರ”!!! ಇದು ಸರ್ಜಾ ಕುಟುಂಬದ ಆಂಜನೇಯನ ಮೇಲಿನ ಭಕ್ತಿಯ ಪರಾಕಾಷ್ಠೆಯಾ ಕಥೆ!!!

ಗಣೇಶ್​​ ಕಾಸರಗೋಡು, ಫಿಲ್ಮ್​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *