ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಎಲ್ಲ ಆರೋಪಿಗಳಿಗೆ ಜಾಮೀನು

ಲಖ್ನೋ: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕ್ರಿಮಿನಲ್ ಪಿತೂರಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ 20,000 ರೂ. ವೈಯಕ್ತಿಕ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವೆ ಉಮಾ ಭಾರತಿ, ವಿನಯ್ ಕಟಿಯಾರ್ ಸೇರಿದಂತೆ ಒಟ್ಟು 12 ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ಇಂದು ಕ್ರಿಮಿನಲ್ ಪಿತೂರಿ ಆರೋಪದ ಕುರಿತು ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಆರಂಭಿಸಿದೆ. ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಇಂದು ವಿಚಾರಣೆಗಾಗಿ ಲಖ್ನೋದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅವರು ಜಾಮೀನು ಕೋರಿ ಮನವಿ ಸಲ್ಲಿಸಿದರು. ಅವರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬಿಜೆಪಿಯ ನಾಯಕ ವಿನಯ್ ಕಟಿಯಾರ್, ವಿಎಚ್​​ಪಿ ನಾಯಕರಾದ ವಿಷ್ಣು ಹರಿ ದಾಲ್ಮಿಯಾ ಮತ್ತು ಸಾಧ್ವಿ ರೀತಾಂಬರ ಅವರಿಗೆ ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಕೋರ್ಟ್​ಗೆ ಹಾಜರಾಗುವುದರಿಂದ ವಿನಾಯಿತಿ ಇಲ್ಲ ಎಂದು ಕೂಡ ಕೋರ್ಟ್ ಹೇಳಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಡೆಸುತ್ತಿದೆ. ಮಹಂತ ನೃತ್ಯ ಗೋಪಾಲ್ ದಾಸ್, ಮಹಂತ ರಾಮ್ ವಿಲಾಸ್ ವೇದಾಂತಿ, ಬೈಕುಂಥ್ ಲಾಲ್ ಶರ್ಮ ಅಲಿಯಾಸ್ ಪ್ರೇಮ್​​ಜಿ, ಚಂಪತ್ ರಾಯ್​ ಬನ್ಸಾಲ್, ಮಹಂತ ಧರ್ಮ ದಾಸ್ ಮತ್ತು ಸತೀಶ್ ಪ್ರಧಾನ್ ಅವರನ್ನು ಕೂಡ ಕೋರ್ಟ್ ವಿಚಾರಣೆ ನಡೆಸಲಿದೆ.

ಏಪ್ರಿಲ್ 19ರಂದು ಸುಪ್ರೀಂ ಕೋರ್ಟ್​​​ ಅಡ್ವಾಣಿ, ಜೋಷಿ, ಉಮಾ ಭಾರತಿ ಸೇರಿದಂತೆ ಇತರರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದ ಕುರಿತು ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಅಲ್ಲದೇ, 25 ವರ್ಷಗಳ ಹಿಂದಿನ ಪ್ರಕರಣದ ತ್ವರಿತ ವಿಚಾರಣೆಗೆ ಸೂಚಿಸಿತ್ತು. ಒಂದು ತಿಂಗಳ ಒಳಗೆ ಕ್ರಿಮಿನಲ್ ಪಿತೂರಿ ವಿಚಾರಣೆ ಆರಂಭಿಸಿ, 2 ವರ್ಷಗಳ ಒಳಗೆ ಅಂತಿಮ ತೀರ್ಪು ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮೇ 30ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ವಿಚಾರಣಾ ನ್ಯಾಯಾಲಯ ನಿರ್ದೇಶಿಸಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *