ಮಂದ್ಸೋರ್​ನಲ್ಲಿ ಮುಂದುವರೆದ ಪ್ರಕ್ಷುಬ್ಧ ಪರಿಸ್ಥಿತಿ

ಮಂದ್ಸೋರ್: ಮಧ್ಯಪ್ರದೇಶದ ಮಂದ್ಸೋರ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನಾನಿರತರು ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆಗಳಲ್ಲಿ ಕೂಡ ಬೆಂಕಿ ಹಚ್ಚಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಜೂನ್ 1ರಿಂದ ಸಾಲ ಮನ್ನಾ ಹಾಗು ತಮ್ಮ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಮಂದ್ಸೋರ್​ನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಗಲಭೆ ನಿಯಂತ್ರಣದ ಸಲುವಾಗಿ ಪೊಲೀಸರು ನಡೆಸಿದ ಗೋಲಿಬಾರ್​​ಗೆ ಇಬ್ಬರು ರೈತರು ಸೇರಿದಂತೆ ಒಟ್ಟು ಆರು ಜನ ಬಲಿಯಾಗಿದ್ದರು. ಗೋಲಿಬಾರ್ ವಿರೋಧಿಸಿ ಇಂದು ರೈತ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಬಂದ್​ಗೆ ಕರೆ ನೀಡಿದ್ದವು.

ಇನ್ನು ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಚಿವರೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚುವರಿ ಭದ್ರತೆ ಕೇಂದ್ರದ ನೆರವು ನಿಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಗೃಹ ಸಚಿವ ಭೂಪೇಂದರ್ ಪತ್ರ ಬರೆದಿದ್ದಾರೆ. ಮಂದ್ಸೋರ್​​ನಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ನೀಮಚ್, ಮಂದ್ಸೋರ್, ದೇವಸ್, ಉಜ್ಜೈನಿಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿದೆ.

ಇನ್ನು ರೈತರ ಸಾಲ ಮನ್ನಾ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ ಸರ್ಕಾರ 1,000 ಕೋಟಿ ರೂ. ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಪ್ರತ್ಯಕ್ಷದರ್ಶಿಗಳ ಪ್ರಕಾರ ಪೊಲೀಸರು ಗೊಲೀಬಾರ್ ನಡೆಸಿದ್ದಾರೆ. ನಿನ್ನೆ ಈ ಕುರಿತು ಪ್ರತಿಕ್ರಿಯಿಸಿದ್ದ ಗೃಹ ಸಚಿವ ಭೂಪೇಂದ್ರ ಸಿಂಗ್ ಗೋಲಿಬಾರ್ ನಡೆದಿಲ್ಲ ಎಂದಿದ್ದರು. ಆದರೆ, ಅವರ ಅಭಿಪ್ರಾಯಕ್ಕೆಕ ವ್ಯತಿರಿಕ್ತವಾಗಿ ಮಂದ್ಸೋರ್​​ ಡಿಜಿಪಿ ಕೂಡ ಹೇಳಿಕೆ ನೀಡಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *