ರಾಹುಲ್ ಮಂದ್ಸೋರ್ ಭೇಟಿ ತಡೆದ ಮಧ್ಯಪ್ರದೇಶ ಪೊಲೀಸರು

ಉದಯಪುರ: ಮಧ್ಯಪ್ರದೇಶದ ಮಂದ್ಸೋರ್​​ನಲ್ಲಿ ನಡೆದ ಗೋಲಿಬಾರ್ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ದೇಶಿತ ಭೇಟಿಯನ್ನು ತಡೆಯಲು ಪೊಲೀಸರು ಮುಂದಾದ ಘಟನೆ ಮಧ್ಯಪ್ರದೇಶದ ಗಡಿಯಲ್ಲಿ ನಡೆದಿದೆ. ಉದಯಪುರದಿಂದ ಮಂದ್ಸೋರ್​ಗೆ ರಾಹುಲ್ ಪ್ರಯಾಣ ಆರಂಭಿಸುವ ವೇಳೆ ಅವರನ್ನು ಪೊಲೀಸರು ನೂಕಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಚಕಮಕಿ ನಡೆದಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಉದ್ದೇಶಿತ ಮಧ್ಯಪ್ರದೇಶದ ಮಂದ್ಸೋರ್ ಭೇಟಿಯನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಈ ಮೂಲಕ ಮಧ್ಯಪ್ರದೇಶ ರೈತರ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದಿದೆ. ಇನ್ನು ನೀಮಚ್​ಗೆ ರಾಹುಲ್ ಗಾಂಧಿಯವರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಸ್​​ಪಿ ತಿಳಿಸಿದ್ದಾರೆ. ಅಲ್ಲದೇ, ಒಂದು ವೇಳೆ ಅವರು ಬಲವಂತವಾಗಿ ನೀಮಚ್​ಗೆ ತೆರಳಿದಲ್ಲಿ, ಅವರನ್ನು ಬಂಧಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಆದರೆ, ಪೊಲೀಸರೊಂದಿಗೆ ನಡೆದ ಚಕಮಕಿಯ ನಂತರ ರಾಹುಲ್ ಗಾಂಧಿ ಬೈಕ್​​ನಲ್ಲಿ ಮಂದ್ಸೋರ್​ಗೆ ತೆರಳುತ್ತಿದ್ದಾರೆ.

ದೇಶದ ಕಾನೂನು ಪ್ರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ರೈತರನ್ನು ಹತ್ಯೆಗೈಯಲಾಗಿದೆ ಎಂದು ರಾಹುಲ್ ಗಾಂಧೀ ಟ್ವೀಟ್ ಮೂಲಕ ಮಧ್ಯಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು 62 ಜನರನ್ನು ಗಲಭೆ ಸಂಬಂಧ ಬಂಧಿಸಲಾಗಿದ್ದು, ಮಂದ್ಸೋರ್ ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಮತ್ತು ಡಿಎಸ್​​ಪಿ ಓಂಪ್ರಕಾಶ್ ತ್ರಿಪಾಠಿಯವರನ್ನು ವರ್ಗಾವಣೆಗೊಳಿಸಲಾಗಿದೆ. ಓಂ ಪ್ರಕಾಶ್ ಶ್ರೀವಾಸ್ತವ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ಮತ್ತು ಮನೋಜ್ ಕುಮಾರ್ ಸಿಂಗ್ ಅವರನ್ನು ನೂತನ ಡಿಎಸ್​​ಪಿಯಾಗಿ ನೇಮಿಸಲಾಗಿದೆ. ಮಧ್ಯಪ್ರದೇಶದಲ್ಲಿ ಗಲಭೆ ನಿಯಂತ್ರಣ ಪಡೆಯ 1,100 ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *