ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಈಗ ಒಬ್ಬಂಟಿ. ದೆಹಲಿಗೆ ಬನ್ನಿ ಮಾತನಾಡೋಣ ಎಂದು ಕರೆಸಿ ಮುಖ ತೋರಿಸದೇ ವಾಪಸ್ ಕಳಿಸಿ ಬಿಟ್ಟರಲ್ಲ ಅಮಿತ್ ಷಾ..!
ಇದು ಈಶ್ವರಪ್ಪನವರಿಗೆ ಅಮಿತ್ ಶಾ ನೀಡಿದ ಸ್ಪಷ್ಟವಾದ ಸಂದೇಶ.. ಇರೋದಿದ್ದರೆ ಸುಮ್ಮನೆ ಇರಿ. ಇಲ್ಲ ಹೋಗ್ತೀರೋ ಹೋಗಿ.
ಅಮಿತ್ ಶಾ ಬೆಂಗಳೂರಿಗೆ ಬಂದಾಗ ಎಲ್ಲ ಬಂಡಾಯಗಾರರು ದುಃಖ ತಪ್ತರ ಜೊತೆ ಮಾತನಾಡಿ ಸಮಾಧಾನ ಪಡಿಸಿದ್ದರು. ಈಶ್ವರಪ್ಪನವರಿಗೆ ಮಾತ್ರ ದೆಹಲಿಗೆ ಬನ್ನಿ ಮಾತನಾಡೋಣ ಎಂದು ಆಹ್ವಾನ ನೀಡಿದ್ದರು. ಈಶ್ವರಪ್ಪಬೇಡಿಕೆಯ ಪಟ್ಟಿ ಹಿಡಿದು ದೆಹಲಿಯ ವಿಮಾನ ಏರಿದ್ದರು. ಅವರ ಬೇಡಿಕೆಯ ಮಟ್ಟಿಯಲ್ಲಿದ್ದ ಮೊದಲ ಬೇಡಿಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬದಲಿಸಿ ಎಂಬುದಾಗಿತ್ತು.
ಈಶ್ವರಪ್ಪ ದೆಹಲಿ ತಲುಪಿದ ಮೇಲೆ ಅಮಿತ್ ಶಾ ಅವರ ಸಿಬ್ಬಂದಿಯಿಂದ ಬಂದ ಸಂದೇಶ ಅಂದರೆ ಸಾಹೇಬರು ನಿಮ್ಮನ್ನು ಭೇಟಿ ಮಾಡುವುದಿಲ್ಲ ಎಂಬುದು. ಹಾಗಿದ್ದರೆ ಮುಂದಿನ ಭೇಟಿಗೆ ಸಮಯ ಯಾವಾಗ ಈ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ.
ಈಶ್ವರಪ್ಪ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಬರಬೇಕಾಯಿತು.
ಈ ಬೆಳವಣಿಗೆಯಿಂದ ಬೇಸರಗೊಂಡ ಈಶ್ವರಪ್ಪ ತಾವು ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ ಎಂದು ಪ್ರಕಟಿಸಿಬಿಟ್ಟರು.

, ಬುಧವಾರ ರಾತ್ರಿ 10 ಗಂಟೆಯ ನಂತರ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಅಮಿತ್ ಶಾ ಅವರು ಭೇಟಿಗೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎನ್ನುವ ಅಪೇಕ್ಷೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇರಬಹುದು ಎಂದು ಅವರು ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಮಾತಿನಿಂದ ಅವರಿಗೆ ಅಮಿತ್ ಶಾ ಅವರ ಮೇಲೂ ಸಿಟ್ಟು ಬಂದಿದೆ ಎಂಬುದು ಸ್ಪಷ್ಟವಾಗಿತ್ತು.
ಇನ್ನು ಈಶ್ವರಪ್ಪನವರಿಗೆ ಬೇರೆ ಸಾರಿ ಉಳಿದಂತೆ ಕಾಣುತ್ತಿಲ್ಲ. ಪಕ್ಷದ ಮುಂದೆ ಸಂಪೂರ್ಣವಾಗಿ ಶರಣಾಗಬೇಕು ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿ ಜೊತೆಗಿನ ಸಂಬಂಧಕ್ಕೆ ನೀರು ಬಿಡಬೇಕು ಅಷ್ಟೇ.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಸೋಲಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈ ಬಲಪಡಿಸುತ್ತೇನೆ.. ಬಿಜೆಪಿ ಹೈಕಮಾಂಡ್, ತಾವು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಮತ್ತೆ ಮಾತುಕತೆಗೆ ಕರೆದರೆ ಹೋಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ