ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪನವರ ಬಂಡಾಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಗ್ರ‍ಹ ಸಚಿವ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿದ ನಂತರ ಅವರು ಮುಂದಿನ ಮಾತುಕತೆಗೆ ಇಂದು ದೆಹಲಿಗೆ ತೆರಳಲಿದ್ದಾರೆ. ರಾತ್ರಿ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ನಿನ್ನೆ ಅವರು ನಡೆಸಿದ ಮಾತುಕತೆಯ ಕೆಲವು ವಿವರಗಳು ಹೊರಗೆ ಬಂದಿದೆ. ಈ ವಿವರಗಳ ಪ್ರಕಾರ ಈಶ್ವರಪ್ಪ ಕೆಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಈ ಷರತ್ತುಗಳನ್ನು ಈಡೇರಿಸಿದರೆ ಮಾತ್ರ ತಾವು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಾಗಿ ಹೇಳಿದ್ದಾರೆ . ಅವರ ಷರತ್ತುಗಳಲ್ಲಿ ಮಹತ್ವವಾದುದೆಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಯಾನದಿಂದ ವಿಜಯೇಂದ್ರ ಅವರನ್ನು ಕೆಳಕ್ಕೆ ಇಳಿಸಬೇಕು. ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು.

ಹಾಗೆ ಈಗ ಪಕ್ಷದ ಅವಗಣನೆಗೆ ಗುರಿಯಾಗಿರುವ ಸಿ. ಟಿ. ರವಿ. ಪ್ರತಾಪ ಸಿಂಹ, ಸದಾನಂದ ಗೌಡ ಅವರ ಪುನರ್ ವಸತಿ ಕಲ್ಪಿಸಬೇಕು. ಅದು ಯಾವ ರೀತಿಯ ಪುನರ್ ವಸತಿ ? ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎನ್ನುವುದು ಅವರ ಒತ್ತಾಯವೆ ? ಈ ಪ್ರಶ್ನೆಗಳಿಗೆ ಇಂದು ರಾತ್ರಿ ಅಥವಾ ನಾಳೆಯ ಹೊತ್ತಿಗೆ ಉತ್ತರ ದೊರಕಬಹುದು.
ಆದರೆ ಈ ಬೆಳವಣಿಗೆಯ ಮಹತ್ವದ ವಿಚಾರ ಎಂದರೆ ಈಶ್ವರಪ್ಪನವರಿಗೆ ಪಕ್ಷದ ವರಿಷ್ಠರಿಗೆ ಸಡ್ಡು ಹೊಡೆಯುವ ಶಕ್ತಿ ಬಂದಿದ್ದು ಎಲ್ಲಿಂದ ? ಅವರಿಗೆ ಈ ಶಕ್ತಿ ಬಂದಿದ್ದು ಎಲ್ಲಿಂದ ? ಬಿಜೆಪಿ ಒಳ ರಾಜಕೀಯ ಬಲ್ಲವರಿಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವಲ್ಲ. ಈಶ್ವರಪ್ಪ ಕಟ್ಟಾ ಹಿಂದುತ್ವವಾದಿ. ಸಂಘ ಪರಿವಾರದ ಬೆಂಬಲ ಅವರಿಗಿದೆ. ಈಗ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಂತೋಷ್ ಅವರು ಈಶ್ವರಪ್ಪ ಅವರಿಗೆ ಹತ್ತಿರ. ಜೊತೆಗೆ ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ಸಂತೋಷ್ ಅವರ ಮಾತು ನಡೆದಿಲ್ಲ. ಅವರ ಬೆಂಬಲಿಗರಲ್ಲಿ ಬಹಳಷ್ಟು ಜನ ಟಿಕೆಟ್ ವಂಚಿತರಾಗಿದ್ದಾರೆ. ಕಟೀಲ್ ಅವರಿಂದ ಹಿಡಿದು ಪಿಟೀಲು ವರೆಗೆ ಎಲ್ಲರೂ ಟಿಕೆಟ್ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಮಣೆ ಹಾಕಿದೆ , ಅವರ ಪುತ್ರ ವಿಜಯೇಂದ್ರ ಅವರನ್ನು ಮಹತ್ವದ ಸ್ಥಾನದಲ್ಲಿ ಕೂಡ್ರಿಸಿದೆ.

ಈ ಬೆಳವಣಿಗೆಗಳನ್ನು ಗಮನಿಸಿದಾಗ ಒಂದು ಅಂಶ ಸ್ಪಷ್ಟ. ಈಶ್ವರಪ್ಪ ಮಾತ್ರ ಅಲ್ಲ, ಕರ್ನಾಟಕದ ರಾಜಕಾರಣದಲ್ಲಿ ಸಂತೋಷ್ ಕೂಡ ಮಹತ್ವವನ್ನು ಕಳೆದುಕೊಂಡಿದ್ದಾರೆ. ಇದು ಅವರನ್ನು ಅಸಂತೋಷರನ್ನಾಗಿ ಮಾಡಿದೆ ಎಂಬುಬು ನಿಜ. ಹೀಗಾಗಿ ಅವರು ತಮ್ಮ ಬೆಂಬಲಿಗರನ್ನು ಬಳಸಿಕೊಂಡು ದಾಳ ಉರುಳಿಸುತ್ತಿದ್ದಾರೆಯೆ ? ಈಶ್ವರಪ್ಪ ಸಂತೋಷ ಅವರ ದಾಳವಾಗಿದ್ದಾರೆಯೆ ? ಈ ಸಾಧ್ಯತೆಯನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಅದಿಲ್ಲದಿದ್ದರೆ ಪಕ್ಷದ ವರಿಷ್ಟರಿಗೆ ಸೆಡ್ದು ಹೊಡೆಯುವುದು ಈಶ್ವರಪ್ಪ ಅವರಿಗೆ ಸಾಧ್ಯವಿರಲಿಲ್ಲ.

ಈ ಬೆಳವಣಿಗೆ ಸಂದರ್ಭದಲ್ಲಿ ಬಿಜೆಪಿ ವರಿಷ್ಟರು ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಡಿ ಅವರನ್ನು ನಿರ್ಲಕ್ಷಿಸಿ ಎಂದು ಸೂಚನೆ ನೀಡಿದ್ದರು. ಆದರಂತೆ ಈಶ್ವರಪ್ಪನವರ ಬಂಡಾಯಕ್ಕೆ ರಾಜ್ಯದ ಯಾವ ನಾಯಕರೂ ಪ್ರತಿಕ್ರಿಯೆ ನೀಡಿರಲಿಲ್ಲ. ಶಿವಮೊಗ್ಗದಿಂದ ಸ್ಪರ್ಧಿಸಿರುವ ರಾಘವೇಂದ್ರ ಮಾತ್ರ ಒಂದೆರಡು ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ ನಿನ್ನೆ ರಾಜ್ಯಕ್ಕೆ ಬಂದ ಅಮಿತ್ ಶಾ ಮಾತ್ರ ಈಶ್ವರಪ್ಪನವರನ್ನು ದೆಹಲಿಗೆ ಬರುವಂತೆ ಆಹ್ವಾನ ನೀಡಿದರು. ಈ ಬದಲಾವಣೆ ಯಾಕೆ ? ಯಾರಿಗೂ ಮಣಿಯದ ಯಾರ ಮಾತನ್ನೂ ಕೇಳದ ಅಮಿತ್ ಶಾ ಈ ಮಾತುಕತೆಯ ಬಾಗಿಲು ಯಾಕೆ ತೆರೆದರು ? ಇದರ ಹಿಂದೆ ಇರುವವರು ಸಂತೋಷ್ ಅವರೇ ಅಲ್ಲವೆ ?.

ಬಿಜೆಪಿಯ ಕೆಲವು ಮೂಲಗಳ ಪ್ರಕಾರ ಈ ಪ್ರಶ್ನೆಗೆ ಉತ್ತರ ಹೌದು. ಈಶ್ವರಪ್ಪನವರ ಶಕ್ತಿ ಎಂದರೆ ಸಂಘ ಪರಿವಾರ. ಬಿ.ಎಲ್. ಸಂತೋಷ್. ಇವತ್ತು ಈಶ್ವರಪ್ಪ ಅತ್ತು ಅಮಿತ್ ಶಾ ಅವರ ನಡುವಿನ ಮಾತುಕತೆಯ ನಂತರ ಈ ಅಂಶ ಇನ್ನಷ್ಟು ಸ್ಪಷ್ಟವಾಗಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ