ಬೆಂಗಳೂರು: ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ಸ್ವತಂತ್ರ ಸಂಸ್ಥೆಗಳ ಅಧಿಕಾರಿಗಳು ಸ್ವತಂತ್ರ ಅಧಿಕಾರಿಗಳಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಕ್ರಮವಾಗಿ ಬಂಧಿಸಿರುವುದನ್ನು ವಿರೋಧಿಸಿ ನಗರದ ಸ್ವತಂತ್ರ ಉದ್ಯಾನವನದಲ್ಲಿ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟವು ಬೃಹತ್‌ ಶಾಂತಿಯುತ ಪ್ರತಿಭಟನೆಯನ್ನು ನಡೆಸಿತು. ಈ ಸಂದರ್ಭ ಅವರು ಮಾತನಾಡುತ್ತ, ಕಳೆದ 10 ವರ್ಷಗಳಲ್ಲಿ ನಾವು ನೋಡಿದ್ದು ಪ್ರಜಾಪ್ರಭುತ್ವದ ಕಗ್ಗೋಲೆ, ವಿವಿಧತೆಯಲ್ಲಿ ಏಕತೆಯಿಂದಿರುವ ಭಾರತದ ನಾಶ, ಜನತಂತ್ರ ವ್ಯವಸ್ಥೆಯ ಸರ್ವನಾಶ, ಸಂವಿಧಾನ ಬದಲಿಸುವ ಪ್ರಯತ್ನ, ಪಾರದರ್ಶಕತೆ ಇಲ್ಲದ ಆಡಳಿತ, ಕೋಮುಗಲಭೆಗಳಾಗಿವೆ ಎಂದರು.

ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಡಿವಾಣ ಹಾಕುತ್ತಿದ್ದಾರೆ, ದೆಹಲಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ರಾಜ್ಯದ ಆಡಳಿತವನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿದ್ದಾರೆ. ಜೈಲಿನಲ್ಲಿರಬೇಕಾದ ಕಡುಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ, ಮುಖ್ಯಮಂತ್ರಿಗಳನ್ನಾಗಿಸುತ್ತಿದ್ದಾರೆ. ರಾಜಕೀಯ ಎದುರಾಳಿಗಳನ್ನು ಇಡಿ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಸುಳ್ಳು ಪ್ರಕರಣಗಳಡಿ ಆರೋಪಿಗಳಾಗಿಸಿ ಕಿರುಕುಳಕೊಡುತ್ತಿದ್ದಾರೆ. ಈ ದೇಶ ಉಳಿಯಬೇಕೆಂದರೆ ಸರ್ವಾಧಿಕಾರಿಯ ಆಡಳಿತಕ್ಕೆ ಅಂತ್ಯಹಾಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ದುಡ್ಡು ಇರುವವರ ಹತ್ತಿರ ಇ.ಡಿ ಹೋಗುತ್ತೆ. ಆಮೇಲೆ ಒಳಗೆ ಹೋಗ್ತಿರಾ, ಹೊರಗೆ ಇರ್ತಿರಾ ಎಂದು ಕೇಳುತ್ತೆ. ಹೊರಗಿರಬೇಕಾದ್ರೆ ಬಿಜೆಪಿ ಹುಂಡಿಗೆ ಕಾಸು ಹಾಕಿ. ಇಲ್ದೇ ಹೋದ್ರೆ ಒಳಗೋಗಿ. ಇದು ನೂರಾರು ಉದ್ಯಮಿಗಳ ಪರಿಸ್ಥಿತಿಯಾಗಿದೆ. ಸಾವಿರಾರು ಕೋಟಿ ರೂ. ಅಕ್ರಮ ಹಣವನ್ನು ಚುನಾವಣಾ ಬಾಂಡ್‌ ಮೂಲಕ ತನ್ನ ಹುಂಡಿಗೆ ಹಾಕಿಸಿಕೊಂಡು ಸಕ್ರಮ ಮಾಡುತ್ತಿದೆ. ಸ್ವಿಸ್‌ ಬ್ಯಾಂಕಿನಲ್ಲಿರು ಎಲ್ಲ ಕಳ್ಳ ದುಡ್ಡನ್ನು ತಂದು ಭಾರತದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು 10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ಅವರೇ ಚುನಾವಣೆ ಬಾಂಡ್‌ ಮೂಲಕ ಸಾವಿರಾರು ಕೋಟಿ ಅಕ್ರಮ ಹಣವನ್ನು ಗುಡ್ಡೆ ಹಾಕಿಕೊಂಡಿದ್ದಾರೆ. ಸರ್ಕಾರಿ ಆಸ್ತಿಗಳನ್ನು ಒಂದುಕಡೆಯಿಂದ ಮಾರಾಟ ಮಾಡಿಕೊಂಡು ಬಂದಿದ್ದರೆ. ದೇಶದ ಸಾಲವನ್ನು ಕೇವಲ 10 ವರ್ಷಗಳಲ್ಲಿ 200 ಪಟ್ಟು ಹೆಚ್ಚಿದ್ದಾರೆ. ಮೊದಲೆಲ್ಲ ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೆ 50 ಸಾವಿರ ಸಾಲವಿತ್ತು. ಆದರೆ ಈಗ ಬರೋಬ್ಬರಿ 1.5 ಲಕ್ಷ ರೂ. ಸಾಲವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ