ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಬಗ್ಗೆ ಏಪ್ರೀಲ್ ೨ ರಂದು ಅಂತಿಮ ನಿರ್ಧಾರವನ್ನು ಸಂಸತ್ ಸದಸ್ಯೆ ಸುಮಲತಾ ಪ್ರಕಟಿಸಲಿದ್ದಾರೆ. ಅಂದು ಮಂಡ್ಯದಲ್ಲೇ ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳ ಸಭೆ ನಡೆಯಲಿದೆ. ಇನ್ನೂ ಮೂರು ದಿನಗಳ ಕಾಲ ಅವರು ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯವನ್ನು ಪಡೆಯಲಿದ್ದಾರೆ.

ಇಂದು ಬೆಂಗಳೂರಿನ ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಈ ವಿಷಯವನ್ನು ಸುಮಲತಾ ಪ್ರಕಟಿಸಿದರು.
ಇಂದು ಬೆಳಗಿನಿಂದಲೇ ಸುಮಲತಾ ಅಭಿಮಾನಿಗಳು ನಗರಕ್ಕೆ ಬರುವುದಕ್ಕೆ ಪ್ರಾರಂಭಿಸಿದ್ದರು. ಬೇರೆ ಬೇರೆ ವಾಹನಗಳಲ್ಲಿ ಬಂದ ಅವರು ಮಾಡುತ್ತಿದ್ದುದು ಒಂದೇ ಒತ್ತಯ. ನಮ್ಮನ್ನು ಬಿಟ್ಟು ಹೋಗಬೇಡಿ. ಚುನಾವಣೆಗೆ ಸ್ಪರ್ಧಿಸಿ ಎಂಬ ಒತ್ತಡವನ್ನು ಅವರು ಹಾಕಿದರು. ಕೆಲವು ಅಭಿಮಾನಿಗಳು ಹೆಚ್ಚು ಭಾವುಕರಾಗಿದ್ದರು. ಅಂಬರೀಶ್ ಮತ್ತು ಸುಮಲತಾ ಅವರು ಜಿಲ್ಲೆಗೆ ನೀಡಿದ ಕೊಡುಗೆಯನ್ನು ಅವರು ನೆನಪು ಮಾಡಿಕೊಂಡರು. ನೀವು ನಮಗೆ ಬೇಕು ಎಂಬ ಘೋಷಣೆಯನ್ನು ಅವರು ಕೂಗಿದರು.

ಇವರೆಲ್ಲರ ಮಾತು ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿದ ಸುಮಲತಾ ನಾನೆಂದೂ ಮಂಡ್ಯವನ್ನು ಬಿಟ್ಟು ಹೋಗುವುದಿಲ್ಲ. ನಿಮ್ಮ ಅಭಿಪ್ರಾಯಗಳಿಗೆ ವಿರೋಧವಾಗಿಯೂ ನಡೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನೀಡಿದರು.

ನಾನು ನಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತ್ರ ಯೋಚಿಸಿದ್ದರೆ ಹೀಗೆ ನಡೆದುಕೊಳ್ಳುತ್ತಿರಲಿಲ್ಲ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ಬಂದಾಗ ಬೇರೆಯವರಾಗಿದ್ದರೆ ನನ್ನಂತೆ ನಡೆದುಕೊಳ್ಳುತ್ತಿದ್ದರಾ ಹೇಳಿ ಎಂದು ತಮ್ಮ ಅಭಿಮಾನಿಗಳನ್ನು ಪ್ರಶ್ನಿಸಿದರು.

ನಾನು ಮಂಡ್ಯವನ್ನು ಬಿಟ್ಟು ರಾಜಕಾರಣ ಮಾಡುವುದಿಲ್ಲ. ಅದನ್ನು ಈ ಹಿಂದೆಯೂ ಹೇಳಿದ್ದೇನೆ. ಇದೇ ನನ್ನ ನಿಲುವಾಗಿದೆ ಎಂದ ಸುಮಲತಾ ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ನನ್ನ ಜೊತೆ ಯಾವುದೇ ದೊಡ್ಡ ನಾಯಕರಿರಲಿಲ್ಲ. ಶಾಸಕರು ಸಚಿವರು ಇರಲಿಲ್ಲ. ಇದ್ದವರು ನೀವು ಮಾತ್ರ ಎಂದರು.

ನಾನು ಸಂಸತ್ ಸದಸ್ಯೆಯಾಗಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ ಎಂದು ಅವರು ನೆನಪು ಮಾಡಿಕೊಟ್ಟರು. ಹಾಗೆ ಕೆಲವು ಸಂದರ್ಭದಲ್ಲಿ ಅವರೂ ಭಾವುಕರಾಗಿದ್ದು ಕಂಡು ಬಂತು. ಅವರ ಕಣ್ಣಂಚಿನಲ್ಲೂ ನೀರಿತ್ತು.
ಸುಮಲತಾ ತಮ್ಮ ರಾಜಕೀಯ ಭವಿಷ್ಯದ ತೀರ್ಮಾನಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಂತೆ ಕಂಡು ಬರುತ್ತಿದೆ. ತಾವು ಚುನಾವಣೆಗೆ ಸ್ಪರ್ಧಿಸಿದರೆ ಜಯಿಸುವುದು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅವರು ಯತ್ನ ನಡೆಸುತ್ತಿದ್ದಾರೆ. ಜೊತೆಗೆ ಬಿಜೆಪಿಯಿಂದ ಬರುವ ಸಂದೇಶಕ್ಕಾಗಿಯೂ ಅವರು ಕಾಯುತ್ತಿರಬಹುದು.
ಏನೇ ಇರಲಿ ಅವರ ರಾಜಕೀಯ ತೀರ್ಮಾನವನ್ನು ತಿಳಿದುಕೊಳ್ಳಲು ಏಪ್ರಿಲ್ ೩ ರವರೆಗೆ ಕಾಯಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ