ಮಂಡ್ಯ : ಮಂಡ್ಯದ ಗಂಡು ಅಂಬರೀಶ್ ಅವರ ಪತ್ನಿ ಸುಮಲತಾ ಈಗ ರಾಜಕೀಯವಾಗಿ ಅತಂತ್ರ. ಇದು ಸ್ವಯಂಕೃತ ಅಪರಾಧ.. ಇದರಿಂದಾಗಿ ಅವರು ಮತ್ತೆ ಸ್ವತಂತ್ರರಾಗುವರೇ ? ಈ ಪ್ರಶ್ನೆಗೆ ಇಂದು ಸಂಜೆಯ ಹೊತ್ತಿಗೆ ಉತ್ತರ ದೊರಕಲಿದೆ.

ಮಂಡ್ಯದ ಜನರ ಪ್ರೀತಿ ವಿಶ್ವಾಸ ಅವರನ್ನು ಸಂಸತ್ತಿನ ಮೆಟ್ಟಿಲು ಏರುವಂತೆ ಮಾಡಿತು. ಮಂಡ್ಯದ ಜನ ಪಕ್ಷವನ್ನು ನೋಡಲಿಲ್ಲ. ಜಾತಿಯನ್ನು ನೋಡಲಿಲ್ಲ. ನಮ್ಮೂರ ಸೊಸೆ ಎಂದು ಪ್ರೀತಿಸಿದರು. ಆಯ್ಕೆ ಮಾಡಿದರು. ಆದರೆ ಸುಮಲತಾ ಇದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಸಂಸತ್ ಮೆಟ್ಟಿಲು ಹತ್ತಿದ ಮೇಲೆ ಗೃಹ ಸಚಿವ ಅಮಿತ್ ಶಾ ಅವರಿಗೆ ಹತ್ತಿರವಾದರು. ಪ್ರಧಾನಿ ನರೇಂದ್ರ ಮೋದಿ ಅವರ ಬಳಗಕ್ಕೆ ಸೇರಿದರು. ಅವರಿಗೆ ಬೇಕು ಎಂದಾಗಲೆಲ್ಲ ಈ ಇಬ್ಬರು ನಾಯಕರ ಸಂದರ್ಶನ ದೊರಕುತ್ತಿತ್ತು.

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದ ಜನ ಕಳುಹಿಸಿದ್ದ ಸುಮಲತಾ ಬಿಜೆಪಿಗೆ ಹತ್ತಿರವಾದರು. ಸದನದಲ್ಲಿ ಬಿಜೆಪಿ ಗೆ ಬೆಂಬಲ ನೀಡಿದರು. ಜೊತೆಗೆ ಮೋದಿ ಅಮಿತ್ ಶಾ ಅವರನ್ನು ಸಂಪೂರ್ಣವಾಗಿ ನಂಬಿದರು. ತಾವು ಮಂಡ್ಯ ಕ್ಷೇತ್ರದ ಮೊದಲ ಬಿಜೆಪಿ ಸಂಸದೆಯಾಗುವ ಕನಸು ಕಂಡರು.

ಈ ಕನಸಿಗೆ ನೀರೆದವರು ಪ್ರಧಾನಿ ಮತ್ತು ಗೃಹ ಸಚಿವರು..ಆದರೆ ಚುನಾವಣೆ ಬರುವ ಹೊತ್ತಿಗೆ ಎಲ್ಲವೂ ಬದಲಾಗಿತ್ತು. ಗೃಹಸಚಿವರು ಮತ್ತು ಪ್ರಧಾನಿ ಮನೆಯಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಕಾಣಿಸಿಕೊಳ್ಳತೊಡಗಿದರು. ಇದರ ಆಳ ಅಗಲವನ್ನು ಸುಮಲತಾ ಅರ್ಥ ಮಾಡಿಕೊಳ್ಳುವ ಮೊದಲೇ ಬಿಜೆಪಿ ತನ್ನ ಆಟವನ್ನು ಆಡಿತ್ತು. ಮಂಡ್ಯ ಕ್ಷೇತ್ರ ಜೆಡಿಎಸ್ ಗೆ. ನಿಮಗೆ ಭವಿಷ್ಯದಲ್ಲಿ ಒಳ್ಳೆಯ ಸ್ಥಾನ ಮಾನ ನೀಡುತ್ತೇವೆ ಎಂದರು ಈ ಇಬ್ಬರು ನಾಯಕರು. ಅಷ್ಟರಲ್ಲಿ ಸುಮಲತಾ ಅವರ ಸ್ಥಾನ ಮಾನ ಎರಡೂ ಹೋಗುವ ಸಂದರ್ಭ ಬಂದು ಬಿಟ್ಟಿತ್ತು.

ಇವತ್ತು ಸುಮಲತಾ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸಲು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಆದರೆ ಈಗಾಗಲೇ ಅವರ ಕೆಲವು ಬೆಂಬಲಿಗರು ಕುಮಾರಣ್ಣನ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..
ಇಲ್ಲಿಗೆ ಎಲ್ಲವೂ ಮುಗಿದಂತೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ