ಬೆಂಗಳೂರು : ಮೈಸೂರಿನ ಸಂಸದ ಪ್ರತಾಪ ಸಿಂಹ ಅವರಿಗೆ ಈಗ ಆತ್ಮಾವಲೋಕನದ ಕಾಲ.. ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಅವರು ತಮಗೆ ಟಿಕೆಟ್ ತಪ್ಪುತ್ತಿದೆ ಎಂದುಕೊಂಡಿರಲಿಲ್ಲ. ಆದರೆ ತಪ್ಪಿ ಹೋಯಿತು. ಉಗ್ರ ಹಿಂದುತ್ವ ತಮ್ಮನ್ನು ಕೈ ಹಿಡಿಯುತ್ತದೆ ಎಂದು ನಂಬಿದ್ದ ಅವರು ಟಿಪ್ಪೂವಿನಿಂದ ಗುಂಭಜ್ ವರೆಗೆ ತಾವೇ ವಿವಾದವನ್ನು ಸೃಷ್ಟಿಸುತ್ತಿದ್ದರು. ತಾವೇ ಸೃಷ್ಟಿಸಿದ ವಿವಾದದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದರು.. ಸಂಘ ಪರಿವಾರದಲ್ಲಿ ತರಬೇತಿ ಪಡೆದವರಿಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದರು.

ಇದ್ಯಾವುದೂ ಅವರಿಗೆ ರಾಜಕೀಯ ಲಾಭವನ್ನು ತಂದುಕೊಡಲಿಲ್ಲ. ಬದಲಾಗಿ ಪಕ್ಷದ ಒಳಗೆ ಸಾಕಷ್ಟು ವಿರೋಧಿಗಳನ್ನು ಕಟ್ಟಿಕೊಂಡರು. ಟಿಕೆಟ್ ಕೂಡ ಕೈತಪ್ಪಿತು. ಸದ್ಯಕ್ಕಂತೂ ಅವರ ರಾಜಕೀಯ ಭವಿಷ್ಯ ಕತ್ತಲೆಯಲ್ಲಿದೆ.

ಈಗ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ರಾಜಕೀಯವಾಗಿ ವಿಫಲವಾಗಿರುವುದನ್ನೆ ಒಪ್ಪಿಕೊಂಡಿದ್ದಾರೆ. ಆದರೆ ಸಂಸದನಾಗಿ ತಾವು ಸಫಲರಾಗಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ರಾಜಕೀಯ ಸಫಲತೆ ಮತ್ತು ವಿಫಲತೆ ಎಂದುರೇನು ಎಂಬುದನ್ನು ಅವರು ಹೇಳಿಲ್ಲ. ಸಂಸದನಾಗಿ ಸಫಲತೆ ಯಾವುದು ಎಂಬ ಬಗ್ಗೆಯೂ ಹೆಚ್ಚಿನ ವಿವರ ನೀಡಿಲ್ಲ.

ಇನ್ನು ಮುಂದು ರಾಜಕೀಯವಾಗಿ ಸಫಲರಾಗುವ ಮಾತನ್ನು ಅವರು ಆಡಿದ್ದಾರೆ. ರಾಜಕೀಯವಾಗಿ ಸಫಲರಾಗುವುದು ಎಂದರೆ ಕುತಂತ್ರದ ರಾಜಕಾರಣವೇ ? ಗೊತ್ತಿಲ್ಲ. ಜೊತೆಗೆ ಪ್ರತಾಪ ಸಿಂಹ ಅವರಿಗೆ ಕುತಂತ್ರದ ರಾಜಕಾರಣ ಗೊತ್ತಿಲ್ಲ ಎಂದು ಹೇಳುವುದು ಕಷ್ಟ, ಆದರೆ ಒಂದಂತೂ ನಿಜ. ಪ್ರತಾಪ ಅವರ ಪ್ರತಾಪ ವ್ಯಕ್ತಪಡಿಸುವ ರೀತಿ ಬದಲಾಗಲಿದೆ. ಅವರು ಬದಲಾಗುತ್ತಾರೋ ಬಿಡುತ್ತಾರೋ ಅವರು ತಾವು ಸಾಗುವ ದಾರಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ