ಬದುಕಲು ನೆಪವೊಂದು ಬೇಕು. ಆದರೆ ಬದುಕಲು ಕೇವಲ ನೆಪವೊಂದೇ ಸಾಕೆ? ಈ ಪ್ರಶ್ನೆಯನ್ನು ಅಂತರಾಷ್ಟ್ರಿಯ ಸಂತೋಷದ ದಿನ (ಮಾರ್ಚ್ 20) ದಂದು ಪ್ರತಿಯೊಬ್ಬ ವ್ಯಕ್ತಿಯೂ ಕೇಳಿಕೊಳ್ಳಬೇಕು. ನಾವೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಲು ಒಂದು ನಿಮಿತ್ತವನ್ನು ಹುಡುಕುವ ಯಾಂತ್ರಿಕತೆಗೆ ಜಾರುತ್ತೇವೆ. ವೈಯಕ್ತಿಕವೊ, ವೃತ್ತಿಪರವೊ ಆದ ಒಂದು ನೆಪ ಬದುಕಿಗೊಂದು ಭರವಸೆ ಕೊಡುತ್ತದೆ. ಈ ಯಾವುದೇ ಭರವಸೆ ಇಲ್ಲದೆ ವ್ಯಕ್ತಿ ಸಂತೋಷದಿಂದ ಬದುಕಲಾರ. ಹಾಗಿದ್ದಾಗ ಸಂತೋಷ ಪಡಲು ಏನು ಬೇಕು? ಯಶಸ್ಸು? ಹಣ? ಹೆಸರು? ಪ್ರೀತಿಸುವವರು? ಇನ್ನೂ ಏನೇನೊ?

ಹಾಗೆ ನೋಡಿದರೆ ಜಾಗತಿಕ ನಂಟು ಯಂತ್ರಗಳ ಮೂಲಕ ಬೆಳೆಯುತ್ತಿರುವಾಗ ಮನುಷ್ಯ ಮನುಷ್ಯನಿಗಿಂತಲೂ ಹೆಚ್ಚು ಯಂತ್ರಗಳ ಜೊತೆಗೆ ಸಂತೋಷವಾಗಿದ್ದ ಹಾಗೆ ಕಾಣುತ್ತದೆ. ಹಾಗಾದರೆ ನಾಯಿಯಂತಹ ನಾಯಿ ಏಕೆ ಮನುಷ್ಯನಿಗೆ ಸಂತೋಷ ಕೊಡುವ ಜೀವವಾಗಬೇಕು? ಎಂಬ ಪ್ರಶ್ನೆಯೂ ಕಾಡುತ್ತದೆ. ಆಗ ಆಧುನಿಕ ಮನುಷ್ಯನ ಅಂತರಾಳವನ್ನು ನೋಡಲಾಗಿ, ಅಲ್ಲಿ ಖಾಲಿತನ ಕಾಣುತ್ತದೆ.

ಬಾಲ್ಯ ಎನ್ನುವ ಬದುಕಿನ ಬುನಾದಿಯಲ್ಲಿ ಲೋಪವಾಗಿದ್ದೇ ಇವತ್ತಿನ ಮನುಷ್ಯನ ಜೀವಂತಿಕೆಗೆ, ಸಂತೋಷಕ್ಕೆ ದೊಡ್ಡ ಅಡತಡೆಯನ್ನು ಉಂಟುಮಾಡಿದೆ. ಬಾಲ್ಯದಲ್ಲಿ ಅಂಕಗಳು, ಪ್ರಶಸ್ತಿಗಳು, ಪದವಿಗಳು ವೈಯಕ್ತಿಕ , ಸಾಮಾಜಿಕ ಸಲ್ಲುವಿಕೆಯನ್ನು ಖಚಿತಪಡಿಸುತ್ತವೆ ಎಂಬ ಭ್ರಮೆ ಮೂಡಿಸುತ್ತವೆ. ಬೆಳೆದ ಹಾಗೆಲ್ಲ ಇದು ಹೌದೆನಿಸಿದರೂ ಒಂದು ಹಂತದ ವಯಸ್ಸನ್ನೂ, ಅನುಭವವನ್ನೂ ದಾಟಿದ ಮೇಲೆ ಛೆ, ಈ ಬದುಕು ಇಷ್ಟೇ ಆಗಿತ್ತ? ನಾನು ಇವನ್ನೆಲ್ಲ ಬೆನ್ನತ್ತಿ ಸಂತೋಷಪಟ್ಟೆನಾ? ಎನಿಸುತ್ತದೆ. ಆಗ ಮತ್ತೇನೋ ಬೇಕೆನಿಸುತ್ತದೆ. ಜಗ್ಗಿ, ಶ್ರೀ ಶ್ರೀ ಯಂತಹವರ ಆಧ್ಯಾತ್ಮಿಕತೆ ರುಚಿಕರವೆನಿಸುತ್ತದೆ. ಆ ಹಂತವನ್ನೂ ದಾಟಿದಾಗ ಅದೂ ಸಹ ಸಪ್ಪೆಯೆನಿಸುತ್ತದೆ. ಜೀವನ ಮತ್ತೆ ಏಕತಾನತೆಗೆ ಸಾಗುತ್ತದೆ.

ನಿನ್ನೆ ಮೊನ್ನೆಯವರೆಗೂ ಆಧುನಿಕ ಮನುಷ್ಯನಿಗೆ ಸಂತೋಷದ ಹಂಗಿರಲಿಲ್ಲ. ಹಳ್ಳಿಗಳಲ್ಲಿ ಹೊಲ ಉಳುತ್ತ, ನೆಟ್ಟಿ ಮಾಡುತ್ತ, ಅಡಿಕೆ ಸುಲಿಯುತ್ತ, ಹಬ್ಬ ಹರಿದಿನಗಳನ್ನು ಆಚರಿಸುತ್ತ ಸುತ್ತಲಿನ ಜೀವಗಳೊಂದಿಗೆ ಬರೆಯುತ್ತ ಬದುಕುತ್ತಿದ್ದಾಗ ಸಂತೋಷ ಎನ್ನುವದರ ಮಹತ್ವ ತಿಳಿದಿರಲಿಲ್ಲ. ನಿತ್ಯ ಸಂಭ್ರಮದ ಹೋಳಿಗೆಯೂಟ ಉಣ್ಣುತ್ತಿದ್ದವರಿಗೆ ಹೊಸ ಹೊಸ ಮೊಬೈಲುಗಳು, ರೀಲುಗಳು, ಬಣ್ಣಬಣ್ಣದ ಬಟ್ಟೆಗಳು, ಸಾಮಾಜಿಕ ಪರಿಗಣನೆ, ಲೈಕುಗಳು, ಡಿಸ್ ಲೈಕುಗಳು ಯಾವುದೂ ವ್ಯತ್ಯಾಸವನ್ನು ಉಂಟುಮಾಡುತ್ತಿರಲಿಲ್ಲ. ಪಟ್ಟಣಗಳಲ್ಲಿ ರಾತ್ರಿಯವರೆಗೆ ಕೆಲಸ ಮಾಡಿ ಮಲಗುವಾಗ ಒಂದು ಪೆಗ್ಗು ಹಾಕಿ, ಹೆಂಡತಿಯೊ, ಗಂಡನೊ , ಪ್ರಿಯನೊ, ಪ್ರಿಯಕರಳೊ ಒಟ್ಟಿಗೆ ಏಕಾಂತವನ್ನು ಅನುಭವಿಸುವಾಗ ಈ ಸಂತೋಷ ಎನ್ನುವ ಪದ ಹೆಚ್ಚು ಮಹತ್ವ ಪಡೆದಿರಲಿಲ್ಲ. ಯಾವಾಗ ಇಂಟರ್ನೆಟ್ ಬಂತೋ ಸಂತೋಷಕ್ಕೊಂದು ಹೊಸ ನುಡಿ ಬಂದಿತು. ಮೊಬೈಲ್ , ಇಂಟರ್ನೆಟ್  ನಮ್ಮ ಸಂತೋಷಕ್ಕೆ ಹೊಸ ಪರಿಭಾಷೆ ಬರೆದವು. ಒಂದು ಐದು ನಿಮಿಷ ಮೊಬೈಲ್ ಇಲ್ಲದವರನ್ನು ನೋಡಿ, ಚಡಪಡಿಸಿಹೋಗುತ್ತಾರೆ. ಡ್ರಗ್ಸ್ ಆದರೂ ಮನುಷ್ಯನ ಮನಸ್ಸಿನ ನಿಯಂತ್ರಣಕ್ಕೆ ಸಿಗುತ್ತೇನೊ? ಈ ಮೊಬೈಲ್ , ಇಂಟರ್ನೆಟ್ ಬಳಕೆ ಇಲ್ಲದೆ ಮನುಷ್ಯ ಸಂತೋಷವಾಗಿರಲಾರ ಎನಿಸುತ್ತದೆ.

ಮೈಂಡ್ ಫುಲ್ ನೆಸ್ ಇದು ಈಗ ಚಾಲ್ತಿಯಲ್ಲಿರುವ ಹೊಸ ಭಾಷೆ. ಈ ಕ್ಷಣಕ್ಕೆ ಸಂಪೂರ್ಣವಾಗಿ ಬದುಕುವುದು ಇದರ ಪರಿಕಲ್ಪನೆ. ಇದನ್ನೇ ಭಾರತೀಯ ಆಧ್ಯಾತ್ಮ, ಧಾರ್ಮಿಕ ಗ್ರಂಥಗಳು, ಪುರಾಣಗಳು, ಕಾವ್ಯಗಳು ಹೇಳಿದ್ದಲ್ಲವೆ? ಇತಿಹಾಸದ ಪಾಪಪ್ರಜ್ಞೆ, ಅವಮಾನ, ಗೆಲುವು, ಸೋಲುಗಳ ಹಂಗಿಲ್ಲದೆ, ಭವಿಷ್ಯದ ಭಯ, ಆತಂಕ, ಮಹತ್ವಾಕಾಂಕ್ಷೆಗಳಿಲ್ಲದೆ ವರ್ತಮಾನದಲ್ಲಿ ಸಿಗುತ್ತಿರುವ ಅಲ್ಪವಿರಲಿ, ಅಗಾಧವಿರಲಿ ಸಂತೋಷ ಸಂತೋಷವಷ್ಟೆ. ಅದಕ್ಕೆ ಕೃತಜ್ಞರಾಗಿರುವುದು ಈ ಮೈಂಡ್ ಫೂಲ್ ನೆಸ್ ನ ಒಂದು ಭಾಗ. ಆ ಕ್ಷಣಕ್ಕೆ ಯಾವುದೇ ವಿಮರ್ಶೆ, ವಿಶ್ಲೇಷಣೆ ಮತ್ತು ತೀರ್ಪಿಲ್ಲದೆ ಬದುಕಿದರೆ ಸಾಕು ಮನಸ್ಸು ಸಮಾಧಾನಗೊಳ್ಳುತ್ತದೆ. ಲೆಕ್ಕಾಚಾರ ಹೆಚ್ಚಿದಷ್ಟು ಮನಸ್ಸು ಮತ್ತು ಬದುಕು ಸಂಕೀರ್ಣವಾಗುತ್ತವೆ. ಆರಾಮವಾಗಿ, ನೇರವಾಗಿ, ಮನಸ್ಸಿಗೆ ಮತ್ತು ಸಮಾಜಕ್ಕೆ ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಬದುಕಿದಷ್ಟೂ ನೆಮ್ಮದಿ , ಸುಖ , ಸಂತೋಷಗಳು ನಮ್ಮದಾಗುತ್ತವೆ.

ಕೃತಜ್ಞತೆಗೂ ಸಂತೋಷಕ್ಕೂ ಒಂದು ನಂಟಿದೆ. ನಾವು ಹೆಚ್ಚು ಹೆಚ್ಚು ಕೃತಜ್ಞರಾಗುತ್ತಿದ್ದ ಹಾಗೆ ನಮ್ಮೊಳಗಿನ ಸಂತೋಷ, ಸಮಾಧಾನಗಳು ಹೆಚ್ಚುತ್ತ ಹೋಗುತ್ತವೆ. ಇರುವಷ್ಟರಲ್ಲೇ ಮನಸ್ಸು ನೆಮ್ಮದಿ ಕಾಣುತ್ತದೆ. ನಮ್ಮ ಬಗ್ಗೆ, ಸುತ್ತಲಿನವರ ಬಗ್ಗೆ ಋಣಾತ್ಮಕ ಭಾವನೆಗಳು ತೊಲಗಿ, ಹೊಸದೊಂದು ನೆಮ್ಮದಿ ಮೂಡುತ್ತದೆ. ತಲೆಯ ಮೇಲಿನ ಭಾರವೆಲ್ಲ ಕರಗಿ ಒಮ್ಮೆಲೆ ಮೈಮನಸ್ಸುಗಳು ಹಗುರಾಗುತ್ತವೆ. ಸಂತೋಷವೆಂಬದು ಪ್ರತಿನಿತ್ಯದ ಆತ್ಮಾನಂದವಾಗುತ್ತದೆ. ಇಂತಹ ಆನಂದ ಸಂತೋಷದ ದಿನದಂದು ಎಲ್ಲರಿಗೂ ಸಿಗಲಿ, ವರ್ಷದ ಪ್ರತಿದಿನವೂ ಸಂತೋಷದ ದಿನವಾಗಲಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ