ಹುಬ್ಬಳ್ಳಿ: ರಾಜ್ಯದಲ್ಲಿ ಈಗ ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ನಡೆ ತೀವ್ರವಾಗಿದ್ದು, ಕಾಂಗ್ರೆಸ್ ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.

ಇಂದು ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಏಕೆ ಹೀಗೆ ಹಿಂದೂ ವಿರೋಧಿ ಕೃತ್ಯಗಳು ಘಟಿಸುತ್ತಿವೆ? ಇದಕ್ಕೆ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯೇ ಕಾರಣ ಎಂದು ಖಂಡಿಸಿದರು.

ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಆಯ್ತು ಎಫ್ ಎಸ್ ಎಲ್ ವರದಿ ಬಂದ್ರೂ ಕ್ರಮವಿಲ್ಲ. ರಾಮೇಶ್ವರ ಕೆಫೇ ಬಾಂಬ್ ಬ್ಲಾಸ್ಟ್ ಆದ್ರೂ ಸರ್ಕಾರ ಎಚ್ಛೆತ್ತುಕೊಂಡಿಲ್ಲ. ಈಗ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ನಡೆದಿದೆ. ಅಂದರೆ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ! ಎಂದು ಸಚಿವ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಪಾಕಿಸ್ತಾನ ಜಿಂದಾಬಾದ್ ಮತ್ತು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಎಷ್ಟು ಜನರನ್ನು ಬಂದಿಸಲಾಗಿದೆ? ಇಂಥ ಅಹಿತಕರ ಘಟನೆಗಳ ವಿರುದ್ಧ ಏನು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಈಗಲೂ ಬಾಯಿ ಬಿಡುತ್ತಿಲ್ಲ. ಇದರಿಂದ ದುಷ್ಕರ್ಮಿಗಳಿಗೆ ಬೆಂಬಲ ಸಿಕ್ಕಂತಾಗಿದೆ. ಸರ್ಕಾರದ ಈ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಸರ್ಕಾರದ ನಡೆಯೇ ಹಿಂದೂ ವಿರೋಧಿಗಳಿಗೆ ಧೈರ್ಯ: ಪಾಕಿಸ್ತಾನ ಜಿಂದಾಬಾದ್ ಘೋಷಣೆಕೋರರನ್ನು ಸಂರಕ್ಷಿಸುವ ಕೆಲಸ ಈ ಸರ್ಕಾರದಿಂದ ನಡೆಯಿತು. ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಮೀಡಿಯದವರಿಗೂ ಬಾಯಿಗೆ ಬಂದ ಹಾಗೆ ಬೈದರು. ಮುಖ್ಯಮಂತ್ರಿ ಸಹ ಇದನ್ನು ಸಮರ್ಥಿಸಿಕೊಳ್ಳತೊಡಗಿದರು. ಇದೆಲ್ಲ ಈಗ ಹಿಂದೂ ವಿರೋಧಿಗಳಿಗೆ ಧೈರ್ಯ ತಂದುಕೊಟ್ಟಿದೆ.

ನಾವೇನೇ ಮಾಡಿದರೂ ರಕ್ಷಣೆಗೆ ಸರ್ಕಾರವೇ ಇದೆ ಎಂಬ ಭಾವನೆ ಆರೋಪಿಗಳಲ್ಲಿದೆ. ಹೀಗಾಗಿ ಈಗ ಹನುಮಾನ್ ಚಾಲೀಸ್ ಹಾಕುವವರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹಿಂದೂ ವಿರೋಧಿಗಳು ಬಲಿಷ್ಠ ಮನಸ್ಥಿತಿ ತಲುಪಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಪ್ರಮುಖ ಕಾರಣ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆಶ್ರಯ: ಹಿಂದೂ ವಿರೋಧಿ ನಡೆ ಅನುಸರಿಸುತ್ತಿರುವ ಕಿಡಿಗೇಡಿಗಳಿಗೆ ಕಾಂಗ್ರೆಸ್ ಸರ್ಕಾರ ಆಶ್ರಯ ಕೊಡುತ್ತಿದೆ. ಇದೇ ರೀತಿ ತು ತುಷ್ಟಿಕರಣದ ರಾಜಕಾರಣ ಮಾಡಿದರೆ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಎಚ್ಚರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ