ಕೊರಿಯನ್ ಡ್ರಾಮಾಗಳಲ್ಲಿ ಯಾವುದು ಅತ್ತ್ಯುತ್ತಮ ಎಂದು ಇಲ್ಲಿ ಹೇಳಲಾರೆ. ನೀವು ನಿಮ್ಮ ಅಭಿರುಚಿಗೆ ತಕ್ಕಂತೆ ಇಷ್ಟಪಡುವ ಹಕ್ಕಿದೆ. ಆದ್ದರಿಂದ ಕತೆಯ ಕೀಲಿಕೈ ಮಾತ್ರ ಕೊಡುವ ಕೆಲಸ ನನ್ನದಾಗಿದೆ.ಪ್ರತಿವಾರ ಎರಡು ಧಾರಾವಾಹಿಗಳ ಕುರಿತು ನೀವು ಓದಲಿದ್ದೀರಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಅವಕಾಶವಿದೆ.

ಇದೇ ಹೆಸರಿನ ಕಾದಂಬರಿ ಆಧಾರಿತ ಧಾರಾವಾಹಿಯಾಗಿದೆ. ಇದು ಕ್ರಿ.ಶ.೧೭೦೦ರಲ್ಲಿ ಜೆಸೊನ್ ರಾಜವಂಶದಲ್ಲಿ ನಡೆಯುವ ಘಟನೆಯಾಗಿದೆ. ಈ ಧಾರಾವಾಹಿ ಪ್ರಮುಖವಾಗಿ ಅವತ್ತಿನ ರಾಜವಂಶದ ಮುಂದುವರಿಕೆ ಮತ್ತು ರಾಣಿಯರು, ದಾಸಿಯರ ಬದುಕಿನ ಬಗ್ಗೆ ಬೆಳಕು ಚೆಲ್ಲುತ್ತದೆ. ೨೦೨೧ರಲ್ಲಿ ತಯಾರಾದ ಈ ಧಾರಾವಾಹಿ 2022ರ ಸಿಯೊಲ್ ಇಂಟರ್ನ್ಯಾಷನಲ್ ಡ್ರಾಮಾ ಪ್ರಶಸ್ತಿ, ಎಂಬಿಸಿ ಪ್ರಶಸ್ತಿ ಸೇರಿದಂತೆ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನವಾಗಿದೆ. ನಿರ್ದೇಶನ, ಛಾಯಾಗ್ರಹಣ, ಪಾತ್ರ ಪರಿಕಲ್ಪನೆ, ಸಂಗೀತ, ಕತೆ, ಸಂಭಾಷಣೆ, ಚಿತ್ರಕತೆ ಎಲ್ಲವೂ ಅತ್ಯುತ್ತಮವಾಗಿವೆ. ಅಂದಿನ ದಾಸಿಯರಿಗೆಲ್ಲ ಅಂಗಿಯ ತೋಳಿನ ತುದಿಗೆ ಕೆಂಪುಪಟ್ಟಿಯಿರುತ್ತಿತ್ತು. ಇಡೀ ಧಾರಾವಾಹಿ ಈ ಕೆಂಪುತೋಳಿನ ದಾಸಿಯರ ಹಿನ್ನೆಲೆಯಲ್ಲಿ ಸಾಗುವುದರಿಂದ ಧಾರಾವಾಹಿಗೆ “ದ ರೆಡ್ ಸ್ಲೀವ್” ಅಂದರೆ “ಕೆಂಪುತೋಳು” ಎನ್ನುವ ಹೆಸರಿಡಲಾಗಿದೆ.

ನಾಯಕ ರಾಜಕುಮಾರ. ರಾಜವಂಶದ ಮುಂದಿನ ಏಕೈಕ ಆಶಾಕಿರಣ. ಆತನ ತಂದೆಯನ್ನು ಸ್ವತಃ ರಾಜನಾಗಿರುವ ಅಜ್ಜನಾದವ ಕೊಲ್ಲಿಸಿರುತ್ತಾನೆ. ವಿಧವೆ ತಾಯಿ ಇರುತ್ತಾಳೆ. ಅಜ್ಜನ ಮಗಳು ಅಂದರೆ ನಾಯಕನ ಅತ್ತೆ ಗಂಡನ ಮನೆಗೆ ಹೋಗದೆ ಇಲ್ಲೇ ಇರುತ್ತಾಳೆ. ಒಬ್ಬ ಮೀನುಗಾರನ ಮಗನನ್ನು ದತ್ತು ತೆಗೆದುಕೊಂಡಿರುತ್ತಾಳೆ. ಎಲ್ಲರಿಗೂ ಒಂದೇ ಕಣ್ಣು ಉತ್ತರಾಧಿಕಾರದ ಮೇಲೆ. ಈ ಸಮಯದಲ್ಲಿ ಹಿರಿಯ ರಾಣಿಯ ಸಾವಾಗುತ್ತದೆ. ಈ ರಾಣಿ ಒಂದು ಕಾಲದಲ್ಲಿ ರಾಜನ ದಾಸಿಯಾಗಿರುತ್ತಾಳೆ. ಈ ಸಾವಿನಲ್ಲಿ ರಾಜನಾದ ಅಜ್ಜನ ಮನಸ್ಸಿನ ಅನಾವರಣದೊಂದಿಗೆ ಕತೆ ನೋಡುಗನ ಮೇಲೆ ಹಿಡಿತ ಸಾಧಿಸುತ್ತದೆ. ಒಬ್ಬ ಮುಗ್ಧ ೭-೮ ವರ್ಷದ ಹುಡುಗಿಯೊಂದಿಗೆ ೬೦ ವರ್ಷ ದಾಟಿದ ವ್ಯಕ್ತಿ ತನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳುವುದು ನಿಜವೇ ಎಂದು ಕೇಳಲಾಗದಷ್ಟು ವಾಸ್ತವವಾಗಿ ಆ ಚಿತ್ರಣವಿದೆ. ಸಾವಿನ ಮನೆಯಲ್ಲಿ ಮನುಷ್ಯ ತನ್ನ ಮುಖವಾಡಗಳನ್ನು ಕಳಚಿ ತನ್ನೊಂದಿಗೆ ತಾನು ಕಳೆಯುವ ಏಕಾಂತವೂ ಹೀಗಿರಬಹುದು ಎನಿಸುತ್ತದೆ.

ಇನ್ನೊಂದೆಡೆ ಸತ್ತ ಹಿರಿಯ ರಾಣಿಯ ಜಾಗದಲ್ಲಿರಬೇಕಾದ ವ್ಯಕ್ತಿ ಈ ಪುಟ್ಟಹುಡುಗಿಯ ಮುಖ್ಯಸ್ಥೆಯಾಗಿರುತ್ತಾಳೆ. ಅವಳಿಗೆ ಈ ಮಗುವಿನ ಜಾಣ್ಮೆ ಬಹಳ ಇಷ್ಟವಾಗಿರುತ್ತದೆ. ಆಕೆಯನ್ನು ಬೆಳೆಸಿ ತನ್ನ ದಾಳವಾಗಿಸಿಕೊಳ್ಳುವ ಇರಾದೆ ಅವಳದ್ದಾಗಿರುತ್ತದೆ. ಅವಳು ಮಗುವಿಗೆ ಹೇಳುತ್ತಾಳೆ. “ನೋಡು, ನೀನು ರಾಣಿಯೇ ಆಗಬೇಕು. ಅಂದರೆ ಮಾತ್ರ ಸಾವಿನಲ್ಲಿ ಇಂತಹ ವೈಭವೋಪೇತ ಮೆರವಣಿಗೆ ಇರುತ್ತದೆ. ನೀನು ಪಟ್ಟದರಸಿಯರ ಸಾಲಿಗೇ ಸೇರಬೇಕು. ” ಆದರೆ ರಾಜನ ಸಂಭಾಷಣೆ ಅವಳಲ್ಲಿ ಒಂದು ಭಾವನೆಯನ್ನು ಖಾಯಂಗೊಳಿಸುತ್ತದೆ. ರಾಣಿಯಾಗುವುದೆಂದರೆ ತನ್ನತನವನ್ನೆಲ್ಲ ಬಿಟ್ಟುಕೊಟ್ಟು ಪಟ್ಟದಲ್ಲೇ ಬಂಧಿಯಾಗಿಬಿಡುವುದು ಮತ್ತು ಸದಾ ತನ್ನ ಆಸೆ, ಆಕಾಂಕ್ಷೆಗಳನ್ನು ಬಲಿಕೊಡುವುದೇ ಆಗಿರುತ್ತದೆ. ಆದ್ದರಿಂದ ತನ್ನತನ ನೀಡದ ರಾಣಿಯ ಪಟ್ಟ ತನಗೆ ಯಾವತ್ತೂ ಬೇಡ ಎನ್ನುವ ನಿರ್ಧಾರದಲ್ಲೇ ಆಕೆ ಬೆಳೆಯುತ್ತಾಳೆ.

ಒಬ್ಬ ತರಬೇತಿಯಲ್ಲಿರುವ ದಾಸಿಯಾಗಿ ಬಂದ ಪುಟ್ಟ ಹುಡುಗಿ ರಾಜಕುಮಾರನ ಅಂತಃಪುರದ ಖಾಯಂ ದಾಸಿಯಾಗುತ್ತಾಳೆ. ಇವಳೊಂದಿಗೆ ಪ್ರೇಮದಲ್ಲಿ ಬಿದ್ದ ರಾಜಕುಮಾರನ ಸಖಿಯೂ ಆಗುತ್ತಾಳೆ. ಆದರೆ ರಾಣಿಯಾಗಲು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಇಬ್ಬರೂ ಪರಸ್ಪರ ಕಷ್ಟ,ಸುಖದಲ್ಲಿ ಜೀವಕ್ಕೆ ಜೀವ ಕೊಟ್ಟು ಜೊತೆಗೆ ನಿಲ್ಲುತ್ತಾರೆ. ಕೊನೆಗೊಂದು ಹಂತದಲ್ಲಿ  ಚಿಕ್ಕವಯಸ್ಸಿನ ಅಜ್ಜಿ (ಅಜ್ಜನ ರಾಣಿ) ಮತ್ತು ಅಮ್ಮನ ಒತ್ತಾಯದ ಮೇರೆಗೆ  ರಾಜಕುಮಾರ ತನ್ನ ಬಾಲ್ಯ ಸ್ನೇಹಿತನೂ ಮತ್ತು ವರ್ತಮಾನದಲ್ಲಿ ಮಂತ್ರಿಯೂ ಆದವನ ಪುಟ್ಟ ತಂಗಿಯನು ಮದುವೆಯಾಗುತ್ತಾನೆ. ಆದರೆ ಆಕೆ ಸಾವನ್ನಪ್ಪುತ್ತಾಳೆ. ತನಗೊಪ್ಪದ ಮದುವೆಗಳನ್ನು ರಾಜ ತನ್ನ ಕಾರ್ಯಕ್ಕಾಗಿ ಹೇಗೆ ಆಗುತ್ತಾನೆ ಮತ್ತು ಆತ ಅಂತರಂಗದಲ್ಲಿ ಎಷ್ಟು ಒಂಟಿಯಾಗಿರುತ್ತಾನೆ ಎನ್ನುವುದನ್ನು ವಿಶೇಷವಾಗಿ ಹೇಳಲಾಗಿದೆ.

ಇವೆಲ್ಲ ಸರಿ, ಇದೇನು ವಿಶೇಷ. ಕನ್ನಡದಲ್ಲಿ ಸಹ ನಿತ್ಯ ನೋಡುವುದಿಲ್ಲವೆ? ಎಷ್ಟೊಂದು ವಿವಾಹೇತರ ಸಂಬಂಧ, ಎರಡನೆ ಮದುವೆ ಎಲ್ಲಾ ಎಂದು ನೀವು ಕೇಳಬಹುದು. ಈ ಧಾರಾವಾಹಿಯ ವಿಶೇಷತೆ ಎಂದರೆ ದಾಸಿಯರ ತಲ್ಲಣಗಳ ಚಿತ್ರಣ. ಒಬ್ಬ ರಾಜ, ರಾಣಿ ಎಲ್ಲಾ ಹೆಸರು ಬರುವುದು ಸೇವಕರಿಂದ, ದಾಸಿಯರಿಂದ. ಅಂತಹ ದಾಸಿಯರಿಗೂ ಮನಸ್ಸಿರುವುದಿಲ್ಲವೇ? ಆಸೆ , ಆಕಾಂಕ್ಷೆಗಳಿರುವುದಿಲ್ಲವೆ? ಅವರನ್ನು ಬಳಸಿ ಬಿಸಾಕಿದರೆ ಏನಾಗಬಹುದು? ಎನ್ನುವ ಒಂದು ಚಿತ್ರಣವೂ ಇಲ್ಲಿದೆ. ಒಂದು ಘಟ್ಟ ಬರುತ್ತದೆ, ದಾಸಿಯರ ಸೈನ್ಯ ರಾಜನ ಸೈನ್ಯದೊಂದಿಗೆ ಯುದ್ಧ ಮಾಡುವ ಚಿತ್ರ. ನೋಡುಗರಲ್ಲಿ ಮೈಜುಂ ಎನ್ನಿಸುತ್ತದೆ. ರೇಷ್ಮೆ ಸಾಕಣೆ, ಹೊಳೆಯಲ್ಲಿ ಕಲ್ಲೆಸೆಯುವ ಆಟ (ಸ್ಕಿಪ್ಪಿಂಗ್ ಸ್ಟೋನ್), ಗಾಳಿಪಟ ಹಾರಿಸುವುದು ಇವುಗಳಂತ ಜನಮಾನಸಕ್ಕೆ ಹತ್ತಿರವಾಗಿರುವ ವಿಷಯಗಳನ್ನು ಕತೆ ಹೇಳಲು ಬಳಸಿಕೊಂಡಿದ್ದು ನಿರ್ದೇಶಕ ಮತ್ತು ಕತೆಗಾರನ ಜಾಣ್ಮೆಗೆ ತಲೆದೂಗಿಸುತ್ತದೆ. ರಾಜನಾಗಿರುವ ಅಜ್ಜ ಮತ್ತು ಮೊಮ್ಮಗ ರಾಜಕುಮಾರನ ನಡುವಿನ ಸಂಬಂಧ, ವಯಸ್ಸಾದ ಮೇಲೆ ಮರಗುಳಿತನದಿಂದ ಬಳಲುವ ವ್ಯಕ್ತಿ ರಾಜನಾಗಿ ಒದ್ದಾಡುವ ಚಿತ್ರಣ, ಗೆಳೆತನ, ಸೋದರತ್ವ ಮತ್ತು ರಾಜಕಾರಣ ಇವೆಲ್ಲದರ ಸೂಕ್ಷ್ಮಗಳು ಕತೆಯನ್ನು ಅಸಾಮಾನ್ಯವಾಗಿಸುತ್ತವೆ.

ಕೊನೆಯಲ್ಲಿ ರಾಜಕುಮಾರ ದಾಸಿಯನ್ನು ಮದುವೆ ಮಾಡಿಕೊಂಡರೆ ಏನಾಗುತ್ತಿತ್ತು? ಪ್ರೇಮದ ಸುಮಧುರ ಬಾಂಧವ್ಯಕ್ಕೆ ಯಾರು ಎಷ್ಟು ಬೆಲೆ ತೆರಬೇಕು? ಆ ಪ್ರೇಮ ಕೊಡುವ ನೋವಿನಲ್ಲೂ ಸುಖವಿರಬಹುದೆ? ಅಥವಾ ಪ್ರೇಮವಿಲ್ಲದ, ಅವಕಾಶವಾದಿತನ ಒಳ್ಳೆಯದಿತ್ತೆ? ಇಂತಹ ಬಹಳಷ್ಟು ಪ್ರಶ್ನೆಗಳನ್ನು ನೋಡುಗನಲ್ಲಿ ಹುಟ್ಟುಹಾಕುವುದು ಈ ಧಾರಾವಾಹಿಯ ಯಶಸ್ಸು?

By ShashidharBhat

ಶಶಿಧರ್ ಭಟ್ ಸುದ್ದಿಟಿವಿಯ ಮುಖ್ಯ ಸಂಪಾದಕರು. ೪ ದಶಕಗಳ ಮಾಧ್ಯಮ ಅನುಭವವಿರುವ ಕನ್ನಡದ ಹಿರಿಯ ಪತ್ರಕರ್ತ. ಇವರು ತಮ್ಮ ರಾಜಕೀಯ ವರದಿಗಾರಿಕೆಯಿಂದ ಮಾಧ್ಯಮದಲ್ಲಿ ಕಾಲಿಟ್ಟು ತಮ್ಮದೇ ಛಾಪು ಮೂಡಿಸಿದವರು. ಪ್ರಸ್ತುತ ರಾಜಕೀಯ ವಿಶ್ಲೇಷಣಾಕಾರರು. ನಿಸ್ಪೃಹ, ನಿರ್ಭೀತ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದಿಂದ ಜನಮಾನಸದಲ್ಲಿ ಮನೆಮಾತಾದವರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ