ಇದೇನಪ್ಪಾ? ಕನ್ನಡಿಗರಾಗಿ ಕನ್ನಡ ವೆಬ್ ಪುಟದಲ್ಲಿ ಈ ರೀತಿ ಬೇರೆ ದೇಶದ ಬೇರೆ ಭಾಷೆಯ ಧಾರಾವಾಹಿಗಳಿಗೆ ಪ್ರಾಮುಖ್ಯತೆ ಕೊಡ್ತಿದ್ದಾರಲ್ಲಾ ಎಂದು ನೀವು ಕೇಳಬಹುದು. ಹೌದು, ಜಾಗತೀಕರಣದ ನಂತರ ವಿಶ್ವವೆಲ್ಲ ಒಂದೇ ಮನೆಯಾಗಿದೆ. ಹಾಗಿರುವಾಗ ಅಕ್ಕಪಕ್ಕದ ಮನೆಯಂತಿರುವ ದೇಶಗಳ ನಮ್ಮ ಸಂಸ್ಕ್ರುತಿಗೆ ಹತ್ತಿರವಿರುವ ಸಿನಿಮಾಗಳು, ನಾಟಕಗಳು, ಧಾರಾವಾಹಿಗಳು ನಮಗೂ ಆಪ್ತವಾಗುತ್ತವೆ. ಅವುಗಳಲ್ಲಿ ಇತ್ತೀಚೆಗೆ ಪ್ರಖ್ಯಾತಿಯನ್ನು ಪಡೆಯುತ್ತಿರುವ ಕೊರಿಯನ್ ಭಾಷೆಯ ಒಟಿಟಿ ಧಾರಾವಾಹಿಗಳ ಬಗ್ಗೆ ಮಾತನಾಡಲೇಬೇಕಾಗುತ್ತದೆ. ಒಂದು ಕಾಲದಲ್ಲಿ ವಿಶ್ವದ ಸಿನೆಮಾಗಳು ಕನ್ನಡ ಸಿನೆಮಾಗಳ ನಿರ್ಮಾಣದಲ್ಲಿ ತಮ್ಮದೇ ಪ್ರಭಾವ ಬೀರಿದ್ದವು. ಈಗ ಧಾರಾವಾಹಿಗಳು ಸಿನಿಮಾಗಳಿಗಿಂತ ಮುಂದೆ ದಾಪುಗಾಲು ಹಾಕುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಕೆ- ಡ್ರಾಮಾಗಳು ಜಗತ್ತಿನ ಮನೆಮನ ಸೆಳೆದಿವೆ. ಒಂದು ದೇಶ , ಪ್ರಾದೇಶಿಕತೆ, ಭಾಷೆ, ಸಂಸ್ಕ್ರುತಿಯನ್ನು ಇಟ್ಟುಕೊಂಡು ಅವುಗಳ ಹಿನ್ನೆಲೆಯಲ್ಲಿ ವರ್ತಮಾನದ ಜೊತೆಗೆ ಮುಖಾಮುಖಿಯಾಗುವ ಯಾವುದೇ ಕಲಾ ಮಾಧ್ಯಮ ಜನಮನಕ್ಕೆ ಹತ್ತಿರವಾಗುತ್ತವೆ. ಆ ದ್ರುಷ್ಟಿಯಿಂದಲೂ ಕೆ-ಡ್ರಾಮಾಗಳ ಬಗ್ಗೆ ಕನ್ನಡಿಗರ ಮನಸೆಳೆಯುವುದು ಈ ಸರಣಿಯ ಉದ್ದೇಶವಾಗಿದೆ.

ಪ್ರಮುಖವಾದ ಕೆ-ಡ್ರಾಮಾಗಳ ಬಗ್ಗೆ ಮಾತನಾಡುವ ಮೊದಲು ಎಲ್ಲಾ ಕೊರಿಯನ್ ಡ್ರಾಮಾಗಳಲ್ಲೂ ಕಾಣಸಿಗುವ ಸಾಮಾನ್ಯ ಅಂಶಗಳ ಬಗ್ಗೆ ಬೆಳಕು ಚೆಲ್ಲಬೇಕಾಗುತ್ತದೆ. ಕನ್ನಡ ಭಾಷೆ , ಸಂಸ್ಕ್ರುತಿ ಕೇವಲ ಮಂಡ್ಯ, ಮೈಸೂರು, ಕರಾವಳಿ, ಮಲೆನಾಡು, ಬಯಲುಸೀಮೆ ಇವುಗಳ ಹಿನ್ನೆಲೆಯಲ್ಲಿ ಆ ಭಾಗದ ತಲ್ಲಣಗಳು, ಕತೆಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು, ಯಶಸ್ಸು ಕಂಡಿದ್ದು ನಮ್ಮ ಮುಂದಿದೆ. ಇಲ್ಲಿ ವಿಭಿನ್ನತೆಯಿದೆ. ಜನರ ಸ್ವೀಕ್ರುತಿಯಲ್ಲಿ ಸೈ ಎನಿಸಿಕೊಂಡಿದ್ದರೂ ಕತೆಯ ಹಂದರ, ಸೂಕ್ಷ್ಮತೆಯಲ್ಲಿ ನಾವಿನ್ನೂ ಅಂಬೆಗಾಲಿಕ್ಕುತ್ತಿದ್ದೇವೆ. ಕೆ-ಡ್ರಾಮಾಗಳ ವಿಶೇಷತೆ ಇಲ್ಲಿದೆ. ಹಳೆಕಾಲದ ವಿಷ್ಣುವರ್ಧನ್ ಅವರ ಸಿನೆಮಾಗಳು, ಬೆಳದಿಂಗಳ ಬಾಲೆಯಂತಹ ಸಿನೆಮಾಗಳು ಬೇಕಷ್ಟಿದ್ದಾವೆ ನಮ್ಮಲ್ಲಿ. ಆದರೆ ಅದೇ ರೀತಿಯ ವಸ್ತುವಿರುವ ಕೆ-ಡ್ರಾಮಾಗಳು ತಮ್ಮ ಪ್ರಸ್ತುತತೆಯಿಂದ ವಾಸ್ತವದೊಂದಿಗೆ ಪೈಪೋಟಿ ನಡೆಸುತ್ತವೆ. ಉದಾಃಗೆ ಕ್ರ್ಯಾಷ್ ಲ್ಯಾಂಡಿಂಗ್ ಒನ್ ಯು ಎನ್ನುವ ಧಾರಾವಾಹಿ. ಇದು ನಮ್ಮ ಮಿಲಿಟರಿ ಹಿನ್ನೆಲೆಯ ಸಿನೆಮಾಗಳ ಕತೆಗಳ ಜೋಡಣೆಯೇನೋ ಅನ್ನಿಸುತ್ತದೆ. ಆದರೆ ಜಾಗತಿಕ ಮಟ್ಟದಲ್ಲಿ ಸೌತ್ ಕೊರಿಯಾ ಮತ್ತು ಉತ್ತರ ಕೊರಿಯಾಗಳ ಸಂಘರ್ಷ, ಅವರ ಹಿಂದುಳಿಯುವಿಕೆಗೆ ಕಾರಣಗಳು, ಮುಂದುವರೆದಿದ್ದರೆ ಅದಕ್ಕೆ ಕಾರಣಗಳು, ಮಿಲಿಟರಿ ಆಡಳಿತ ಮತ್ತು ಪ್ರಜಾಪ್ರಭುತ್ವದ ಆಗುಹೋಗುಗಳು, ಮನುಷ್ಯ ಸಂಬಂಧಗಳು ಇವನ್ನೆಲ್ಲ ಸೂಕ್ಷ್ಮವಾಗಿ, ವಿಸ್ತಾರವಾಗಿ ಎಲ್ಲದಕ್ಕೂ ಮಿಗಿಲಾಗಿ ವೀಕ್ಷಕನಿಗೆ ಮನರಂಜಿಸುವ ರೀತಿಯಲ್ಲಿ ಇದೆ.

ಕತೆಗಳು – ಸಾಮಾನ್ಯವಾಗಿ ಕೆ-ಡ್ರಾಮಾಗಳ ಕತೆಗಳು ನಾಲ್ಕು ವಿಭಾಗಗಳಲ್ಲಿ ತೆರೆದುಕೊಳ್ಳುತ್ತವೆ. ಸಸ್ಪೆನ್ಸ್, ಥ್ರಿಲ್ಲರ್, ರೊಮ್ಯಾಂಟಿಕ್, ಕಾಮೆಡಿ ಹೀಗೆ ಪ್ರತ್ಯೇಕವಾಗಿ ವಿಂಗಡಿಸುವ ಅವಶ್ಯಕತೆ ಇರುವುದಿಲ್ಲ. ಪ್ರತಿ ಧಾರಾವಾಹಿಯೂ ೧೬ ರಿಂದ ೨೦ ಸಂಚಿಕೆಗಳಲ್ಲಿ ಪ್ರಸಾರವಾಗುತ್ತದೆ. ಒಂದು ಗಂಟೆಯ ಅವಧಿಯಲ್ಲಿ ವೀಕ್ಷಕನನ್ನು ಕಟ್ಟಿ ಕೂಡಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಪ್ರತಿ ಧಾರಾವಾಹಿಯ ಆರಂಭ ಕತೆಯ ಮೂಲ ಕೇಂದ್ರವಾಗಿರುತ್ತದೆ. ಆದರೆ ಗುಟ್ಟು ಮಾತ್ರ ಸರಣಿ ಮುಂದುವರೆದ ಹಾಗೆ ತೆರೆದುಕೊಳ್ಳುತ್ತ ಹೋಗುತ್ತದೆ. ಮಧ್ಯದ ಸಂಚಿಕೆಗಳು ಪಾತ್ರಗಳ ಪರಿಸ್ಥಿತಿ, ಮನಸ್ಥಿತಿ, ಹಿನ್ನೆಲೆ, ಸಂಬಂಧಗಳು, ವಾಸ್ತವಗಳು ಎಲ್ಲವನ್ನೂ ಅನಾವರಣ ಮಾಡುತ್ತ ಸರಣಿ ಮುಗಿಯುವ ಹೊತ್ತಿಗೆ ನಾಲ್ಕು ಕಂತಿರುವಾಗ ವೀಕ್ಷಕನನ್ನು ತುದಿಗಾಲಲ್ಲಿ ಕೂಡಿಸುತ್ತವೆ. ಇಡೀ ಕತೆ ಕೇವಲ ಪ್ರಣಯ, ನಾಯಕ/ನಾಯಕಿಯ ವೈಭವೀಕರಣದಲ್ಲಿ ಮುಗಿಯುವುದಿಲ್ಲ. ಬದಲಿಗೆ ಕತೆಯ ನಾಯಕ/ನಾಯಕಿ ಕತೆ ಹೇಳುವ ಪಾತ್ರಧಾರಿಗಳಾಗಿ ಬದಲಾಗುತ್ತಾರೆ. ಅವರೊಂದಿಗೆ ಅವರ ಇಡೀ ಬದುಕು ಕತೆಯನ್ನು ಬೆಳೆಸುತ್ತದೆ. ಅದು ಸಹಜವಾಗಿ, ನೇರವಾಗಿ, ಗೊಂದಲಗಳಿಲ್ಲದೆ ಸ್ಪಷ್ಟವಾಗಿ ಮುಂದುವರೆಯುತ್ತದೆ. ಎಲ್ಲೂ ಅಸ್ಪಷ್ಟತೆ, ಗೋಜಲು ಕಾಣುವುದಿಲ್ಲ. ಇದು ಜನರಿಗೆ ಹತ್ತಿರವಾಗುವ ಕಥಾ ನಿರೂಪಣೆಯ ತಂತ್ರ. ಇಲ್ಲಿ ಕುತೂಹಲ, ಹಾಸ್ಯ, ಪ್ರಣಯ, ಶ್ರುಂಗಾರ, ಕ್ರೌರ್ಯ, ರಾಜಕೀಯ, ಹಣಕಾಸು, ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ ಹೀಗೆ ಹತ್ತು ಹಲವು ಆಯಾಮಗಳ ಪರಿಚಯವಿರುತ್ತದೆ. ಗಾಢ ಪ್ರಸ್ತುತತೆ ಇರುತ್ತದೆ. ಇದನ್ನು ನಾವು ಗಮನಿಸಬೇಕಾಗುತ್ತದೆ.

ಮನುಷ್ಯನ ಬಾಲ್ಯ ಮತ್ತು ಮಾನಸಿಕತೆಯ ಮೇಲೆ ಸಾಕಷ್ಟು ಅಧ್ಯಯನಶೀಲತೆ ಕತೆಗಳಲ್ಲಿ ಸಾಮಾನ್ಯ ಅಂಶವಾಗಿರುತ್ತದೆ. ಬಾಲ್ಯ ಎನ್ನುವುದು ಮನುಷ್ಯನ ವರ್ತಮಾನದ ಮೂಲಭೂತ ಅಂಶ ಎನ್ನುವುದನ್ನು ಕೊರಿಯನ್ ಕತೆಗಾರರು ಭಾವಿಸುತ್ತಾರೆ. ವ್ಯಕ್ತಿಯ ಬಾಲ್ಯ ಎಷ್ಟು ಮುಖ್ಯವೋ ವ್ಯಕ್ತಿಯ ಅಂತ್ಯವೂ ಅಷ್ಟೇ ಮುಖ್ಯ ಎನ್ನುವುದನ್ನ ಮನಗಾಣಿಸುತ್ತವೆ. ಉದಾಃಗೆ ಫ್ಯಾಂಟ್ಯಾಸ್ಟಿಕ್. ಈ ಧಾರಾವಾಹಿಯಲ್ಲಿ ನಾಯಕ ನಟನೆ ಬಾರದ ಆಕ್ಷನ್ ಹೀರೊ. ಆತನಿಗೊಂದು ಆಶಾವಾದವಿದೆ. ತಾನು ಸತ್ತಾಗ ತನ್ನ ಅಂತ್ಯಕ್ರಿಯೆ ಹೇಗೆ ನಡೆಯಬೇಕು ಎನ್ನುವುದನ್ನು ಆತ ಕನಸು ಕಾಣುತ್ತಾನೆ. ಇಂತಹ ಒಂದು ಪರಿಕಲ್ಪನೆ ನೋಡುಗನನ್ನು ಸಾವಿನ ವಾಸ್ತವದತ್ತ ಗಮನಹರಿಸುವಂತೆ ಮಾಡುತ್ತವೆ.  ಪ್ರತಿಯೊಂದು ಧಾರಾವಾಹಿಯೂ ಬಾಲ್ಯ ಮತ್ತು ಸಾವಿನ ಜೊತೆಗೆ ವ್ಯಕ್ತಿಯ ವ್ಯಕ್ತಿತ್ವ ಮುಖಾಮುಖಿಯಾಗುವುದನ್ನು ತೆರೆದಿಡುತ್ತವೆ. ಇನ್ನೊಂದು ಸಾಮಾನ್ಯ ಅಂಶ ಸಮಾಜವಾದ. ಸಾಮಾಜಿಕವಾಗಿ ಹಿಂದುಳಿದವರು ಎನ್ನಲಾಗುವ ಎಲ್ಲಾ ವರ್ಗಗಳೂ ಒಂದಿಲ್ಲ ಒಂದು ದಿನ ತಮ್ಮ ಹಿನ್ನೆಲೆಯನ್ನು ಮೀರಿ ಏನು ಬೇಕಾದರೂ ಆಗಬಹುದು, ಅವರ ಬದುಕು ಉತ್ತಮಗೊಳ್ಳುತ್ತದೆ ಎನ್ನುವ ಆಶಾವಾದ ಕತೆಗಳಲ್ಲಿರುತ್ತದೆ.

ಸಂಭಾಷಣೆ, ಚಿತ್ರಕತೆ: ಇಲ್ಲಿ ಕಳಪೆ ಇಲ್ಲವೆಂದು ಹೇಳಲಾಗದು, ಆದರೆ ಬಹುತೇಕ ಶೇ.೮೫ರಷ್ಟು ಕತೆಗಳ ಸಂಭಾಷಣೆ ಮತ್ತು ಚಿತ್ರಕತೆ ಬಹಳ ವೇಗವಾಗಿ, ಮನಮುಟ್ಟುವ ರೀತಿಯಲ್ಲಿರುತ್ತವೆ. ಸಾಕಷ್ಟು ಅಧ್ಯಯನ, ತಿದ್ದುಪಡಿ, ಎಚ್ಚರಿಕೆ, ಅನುಭವ, ಅನುಭಾವ ಎಲ್ಲವನ್ನೂ ಈ ಡ್ರಾಮಾಗಳ ಚಿತ್ರಕತೆ ಮತ್ತು ಸಂಭಾಷಣೆಯಲ್ಲಿ ನಾವು ನೋಡಬಹುದಾಗಿದೆ. ಒಂದು ವೈದ್ಯಕೀಯ ಸಂದರ್ಭವನ್ನೇ ತೆಗೆದುಕೊಂಡರೆ ಅದು ಒಂದು ಜಾಗ್ರುತಿಯಾಗದೇ , ಕತೆಗೆ ಪೂರಕವಾಗಿ ವಾಸ್ತವದಲ್ಲಿ ಮುಂದುವರೆಯುತ್ತದೆ. ಸಂಭಾಷಣೆಗಾರ ಶ್ರುಂಗಾರದಲ್ಲಿ ತನ್ನ ಬುದ್ಧಿಯನ್ನು ಬಳಸುತ್ತಾನೆ.  ಆ ಪ್ರಣಯ, ಶ್ರುಂಗಾರಗಳ ದ್ರುಶ್ಯಗಳು ಒಂದು ಗಡಿ ದಾಟಿ ಅಸಹ್ಯ ಅಥವಾ ಅಶ್ಲೀಲತೆಯಾಗದೆ ನೋಡುಗನ ಮನದಲ್ಲಿ ನವಿರಾದ ಭಾವ ಮೂಡಿಸುವಂತಿರುತ್ತವೆ. ಹಾಸ್ಯಗಳು ವಾಸ್ತವದಲ್ಲಿರುತ್ತವೆ. ರಾಜಕೀಯ, ಸಾಮಾಜಿಕ, ಕೋಮು ಸಂಘರ್ಷಗಳ ಬಗ್ಗೆ ಹೇಳುವಾಗ ಎಚ್ಚರಿಕೆಯಿರುತ್ತದೆ. ಒಟ್ಟಿನಲ್ಲಿ ಕೆ-ಡ್ರಾಮಾಗಳ ಯಶಸ್ಸಿನ ಹಿಂದೆ ಇಡೀ ಚಿತ್ರಕತೆ ಮತ್ತು ಸಂಭಾಷಣಾಕಾರರ ವಿಪರೀತ ಪರಿಶ್ರಮ ಎದ್ದುಕಾಣುತ್ತದೆ.

ತಾಂತ್ರಿಕತೆ: ಇದೂ ಕೂಡ ಒಂದು ಮಾಧ್ಯಮದ ಯಶಸ್ಸಿಗೆ ಮುಖ್ಯ. ಮಾಧ್ಯಮಕ್ಕೆಂದೇ ಪ್ರತ್ಯೇಕ ನಗರವಿರುವ ದಕ್ಷಿಣ ಕೊರಿಯಾದ ರಾಜಧಾನಿ ಸಿಯೊಲ್! ಪ್ರತಿನಿತ್ಯ ಹೊಸ ಹೊಸ ಸ್ರುಷ್ಟಿಯೇ ಅದರ ಪ್ರಮುಖ ಉದ್ದೇಶ, ಆದಾಯ, ಜೀವಾಳ ಎಲ್ಲಾ. ಅಂದಮೇಲೆ ತಾಂತ್ರಿಕತೆಯೂ ಚೆನ್ನಾಗಿರಲೇಬೇಕು. ಕ್ಯಾಮರಾ ಚಿತ್ರೀಕರಣವಿರಬಹುದು, ಸಂಕಲನವಿರಬಹುದು, ಗ್ರಾಫಿಕ್ಸ್ ಗಳ ಬಳಕೆ ಇರಬಹುದು ಯಾವುದರಲ್ಲಿಯೂ ಕತೆ ಮತ್ತು ಸಂಭಾಷಣೆಯನ್ನು ತಾಂತ್ರಿಕತೆ ಎಲ್ಲೆ ಮೀರಿ ತನ್ನ ಛಾಪನ್ನು ಒತ್ತುವುದಿಲ್ಲ. ಇದೂ ಸಹ ನೋಡುಗನ ಹ್ರುದಯಕ್ಕೆ ಕೆ-ಡ್ರಾಮಾಗಳು ಹತ್ತಿರವಾಗುವಂತೆ ಮಾಡುವುದರಲ್ಲಿ ತನ್ನ ಪಾಲು ನೀಡಿದೆ.

ಮಾರುಕಟ್ಟೆ: ಹೌದು, ಇದು ಇವತ್ತಿನ ಅವಶ್ಯಕತೆ. ಮಾರುಕಟ್ಟೆಯಲ್ಲಿ ಎರಡು ವಿಧ. ಒಂದು ಕಳಪೆ ಮಾಲನ್ನು ದೊಡ್ಡ ಸದ್ದಿನೊಂದಿಗೆ ಬಿಕರಿ ಮಾಡುವುದು ಎರಡನೆಯದು ಅತ್ಯುತ್ತಮ ಮಾಲನ್ನು ಸದ್ದಿಲ್ಲದೆ ಮನೆಮನೆಗೆ ತಲುಪಿಸುವುದು. ಕೆ-ಡ್ರಾಮಾಗಳು ಎರಡನೆಯ ಸಾಲಿಗೆ ಸೇರುತ್ತವೆ. ಅವುಗಳಲ್ಲಿ ತೋರುವ ಪರಿಶ್ರಮ, ತನ್ಮಯತೆ, ಸಮರ್ಪಣೆ ವೀಕ್ಷಕನ ಮನ-ಮನೆ ಮುಟ್ಟುವಂತಿದೆ. ಆದ್ದರಿಂದಲೇ ವಿಶ್ವದ ಎಲ್ಲೆಡೆಯ ಭಾಷೆಗಳಿಗೆ ಇವುಗಳು ಪ್ರತಿನಿತ್ಯ ತರ್ಜುಮೆಗೊಳ್ಳುತ್ತಿವೆ.

ಇನ್ನು ಸಾಮಾನ್ಯ ವಿಷಯಗಳೆಂದರೆ ಪ್ರತಿ ಧಾರಾವಾಹಿ ಸರಣಿಯಲ್ಲೊಂದೆರಡು ಚುಂಬನ ದ್ರುಶ್ಯಗಳು, ರಹಸ್ಯಗಳು, ವರ್ಕಿಂಗ್ ಲಂಚ್, ಕುಡಿತದ ಪಾರ್ಟಿಗಳು, ಕೆಲಸದ ಸ್ಥಳದ ರಾಜಕಾರಣ, ವರ್ಷಕ್ಕೊಮ್ಮೆ ಬರುವ ಹಿರಿಯರ ಶ್ರಾದ್ಧ, ಕೌಟುಂಬಿಕ ಸಾಮರಸ್ಯ ಮತ್ತು ಸಂಘರ್ಷ, ಮನುಷ್ಯನ ಮಾನಸಿಕತೆ ಮತ್ತು ಪರಿಸ್ಥಿತಿಗನುಗುಣವಾಗಿ ಅವನ ಪ್ರತಿಕ್ರಿಯೆ. ಆದರೆ ಒಮ್ಮೆಯೂ ಇವೆಲ್ಲ ಇಲ್ಲಿ ಬೇಕಿರಲಿಲ್ಲ ಎಂದು ಅನ್ನಿಸದೇ ಇರುವ ಹಾಗೆ ಕತೆ ಹೇಳಲಾಗುವುದು ವಿಶೇಷತೆ. ವ್ಯಕ್ತಿತ್ವ ವಿಕಸನ ಮತ್ತು ಆಧುನಿಕ ಆಗುಹೋಗುಗಗಳ ಒಡ್ಡಿಕೊಳ್ಳುವಿಕೆ ನಿಮಗೆ ಅಗತ್ಯವಾಗಿದ್ದರೆ ಕೆ-ಡ್ರಾಮಾಗಳ ವೀಕ್ಷಣೆ ಒಂದು ಹೊಸ ಅನುಭವವನ್ನೇ ನೀಡುವುದರಲ್ಲಿ ಎರಡು ಮಾತಿಲ್ಲ.

ಬನ್ನಿ, ಒಂದೊಂದೇ ಧಾರಾವಾಹಿಗಳನ್ನು ಪರಿಚಯಮಾಡಿಕೊಳ್ಳೋಣ.

By ShashidharBhat

ಶಶಿಧರ್ ಭಟ್ ಸುದ್ದಿಟಿವಿಯ ಮುಖ್ಯ ಸಂಪಾದಕರು. ೪ ದಶಕಗಳ ಮಾಧ್ಯಮ ಅನುಭವವಿರುವ ಕನ್ನಡದ ಹಿರಿಯ ಪತ್ರಕರ್ತ. ಇವರು ತಮ್ಮ ರಾಜಕೀಯ ವರದಿಗಾರಿಕೆಯಿಂದ ಮಾಧ್ಯಮದಲ್ಲಿ ಕಾಲಿಟ್ಟು ತಮ್ಮದೇ ಛಾಪು ಮೂಡಿಸಿದವರು. ಪ್ರಸ್ತುತ ರಾಜಕೀಯ ವಿಶ್ಲೇಷಣಾಕಾರರು. ನಿಸ್ಪೃಹ, ನಿರ್ಭೀತ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದಿಂದ ಜನಮಾನಸದಲ್ಲಿ ಮನೆಮಾತಾದವರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ