ಮಧ್ಯಪ್ರದೇಶದ ಗೋಲಿಬಾರ್​ಗೆ ನಾಲ್ವರ ಬಲಿ​​: ರೈತರ ಪ್ರತಿಭಟನೆ ಹತ್ತಿಕ್ಕಲು ಕ್ರಮ

ಮಂದ್​ಸೋರ್: ಮಧ್ಯಪ್ರದೇಶದ ರೈತರು ಸಾಲ ಮನ್ನಾ ಮತ್ತು ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನಡೆಸಿದ ಗೋಲಿಬಾರ್​​ಗೆ ನಾಲ್ವರು ಬಲಿಯಾಗಿ, 4 ನಾಗರಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮಧ್ಯಪ್ರದೇಶದ ಮಂದ್​ಸೋರ್​ನಲ್ಲಿ ಈ ದುರ್ಘಟನೆ ನಡೆದಿದೆ.

ಆದರೆ, ಗೋಲಿಬಾರ್ ನಡೆದಿಲ್ಲ ಎಂದು ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ. ರೈತರ ಪ್ರತಿಭಟನೆಯನ್ನು ತಡೆಯವ ಸಲುವಾಗಿ ಸಿಆರ್​ಪಿಎಫ್​​ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ಇದರಲ್ಲಿ ಸಮಾಜದ್ರೋಹಿಗಳ ಕೈವಾಡವಿದೆ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ತಪ್ಪಿತಸ್ಥರ ವಿರುದ್ಧ ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳುವುದಾಗಿ ಕೂಡ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ಹಾಲಿನ ಉತ್ಪಾದನೆಗೆ ಲೀಟರ್​​ಗೆ 37 ರೂ. ಖರ್ಚಾಗುತ್ತಿದೆ. ಆದ್ದರಿಂದ ಕನಿಷ್ಠ 50 ರೂ. ನಿಗದಿ ಮಾಡಬೇಕು ಎಂದು ಕೂಡ ಅವರು ಮನವಿ ಮಾಡಿಕೊಂಡಿದ್ದರು. ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಸಿಂಗ್ ಅವರ ಪ್ರಕಾರ ಮಂದ್​ಸೋರ್ ಜಿಲ್ಲೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಅಲ್ಲದೇ, ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಯಲ್ಲಿದೆ. ಇನ್ನು ಸಾವು ನೋವಿನ ಕುರಿತು ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಕಳೆದ ಭಾನುವಾರ ಆರ್​ಎಸ್​ಎಸ್​​ ಮೂಲದ ಭಾರತೀಯ ಕಿಸಾನ್ ಸಂಘ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ನಡೆದ ಸಭೆಯ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು. ಆದರೆ, ಭಾರತೀಯ ಕಿಸಾನ್ ಯೂನಿಯನ್ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿತ್ತು.

ಕೆಲವು ವ್ಯಕ್ತಿಗಳು ರೈತರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದರು. ಅಲ್ಲದೇ, ಪ್ರತಿಭಟನೆಗೆ ಕುಮ್ಮಕ್ಕು ನೀಡುವವರು ಹಿಂದೆ ಸರಿಯದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ಕೂಡ ನೀಡಿದ್ದರು. 8 ರೂ. ಕೆಜಿಯಂತೆ 22 ಜಿಲ್ಲೆಗಳ 48 ಸ್ಥಳಗಳಲ್ಲಿ 1,000 ಕೋಟಿ ರೂ. ಮೊತ್ತದ ಈರುಳ್ಳಿಯನ್ನು ಖರೀಸಿದಿಸುವುದಾಗಿ ಕೂಡ ಅವರು ಭರವಸೆ ನೀಡಿದ್ದರು.

ಆದರೆ, ಅವರು ನೀಡಿದ ಭರವಸೆಯ ನಂತರ ಪ್ರತಿಭಟನೆಯನ್ನು ಆರ್​ಎಸ್​​ಎಸ್​​ ಮೂಲದ ಸಂಘಟನೆ ಹಿಂತೆಗೆದುಕೊಂಡಿತ್ತು. ಇದರಿಂದಾಗಿ ರೈತ ಸಂಘಟನೆಗಳಲ್ಲಿ ಒಡಕು ಮೂಡಿ, ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸಿದ್ದವು. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ಕೂಡ ಕಳೆದ ಶುಕ್ರವಾರ ನಡೆದಿತ್ತು. ನಿನ್ನೆ ಕೂಡ ಮಧ್ಯಪ್ರದೇಶ ಪೊಲೀಸರೊಂದಿಗೆ ರೈತರು ಘರ್ಷಣೆಗೆ ಇಳಿದಿದ್ದರು. ಕನಿಷ್ಠ ಇಬ್ಬರು ಪೊಲೀಸರು ಮತ್ತು ನಾಗರಿಕರು ನಿನ್ನೆ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದರು.

ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆ ಕುರಿತ ಟ್ವೀಟ್ ಮಾಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸರ್ಕಾರ ದೇಶದ ರೈತರೊಂದಿಗೆ ಯುದ್ಧಕ್ಕಿಳಿದಿದೆ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *