ಬೆಂಗಳೂರು: ಧರ್ಮಸ್ಥಳದ ಅಕ್ರಮ ಚಟುವಟಿಕೆಗಳ ಕುರಿತು ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಯ ಸಂಪೂರ್ಣ ವರದಿಯನ್ನು ಎಸ್ ಐಟಿಯಿಂದ ಮಹಿಳಾ ಆಯೋಗ ಪಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಹಕ್ಕು ಸಂಘಟನೆಗಳು ಒಟ್ಟಾಗಿ ಮನವಿ ಸಲ್ಲಿಸಿವೆ.
ಆಯೋಗದ ಅಧ್ಯಕ್ಷೆಯವರಿಗೆ ನೀಡಿದ ಮನವಿಯಲ್ಲಿ, ಧರ್ಮಸ್ಥಳ ಪ್ರದೇಶದಲ್ಲಿ ನಡೆಯುತ್ತಿರುವ ಮಹಿಳಾ ಶೋಷಣೆ, ಭೂ ಹಕ್ಕು ಉಲ್ಲಂಘನೆ ಹಾಗೂ ಅಕ್ರಮ ಹಣಕಾಸು ವ್ಯವಹಾರಗಳ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದ್ದರೂ, ಅದರ ವಿವರಗಳು ಬಹಿರಂಗಗೊಂಡಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಲಾಗಿದೆ.
“ಸಾಮಾನ್ಯ ನಾಗರಿಕರಿಗೆ ನ್ಯಾಯ ದೊರಕಲು ಹಾಗೂ ಮಹಿಳೆಯರ ಮೇಲೆ ನಡೆದಿರುವ ಅನ್ಯಾಯ ಸ್ಪಷ್ಟವಾಗಲು ಎಸ್‌ಐಟಿ ತನಿಖೆಯ ಸಂಪೂರ್ಣ ವರದಿ ಮಹಿಳಾ ಆಯೋಗವು ಅಧಿಕೃತವಾಗಿ ಕೇಳಿ ಪಡೆಯಬೇಕು ಮತ್ತು ಸಾರ್ವಜನಿಕವಾಗಿ ಪ್ರಕಟಿಸಬೇಕು” ಎಂದು ಮನವಿದಾರರು ಹೇಳಿದ್ದಾರೆ. ಆಯೋಗದ ಮೂಲಗಳು ತಿಳಿಸಿದಂತೆ, ಮನವಿಯನ್ನು ಸ್ವೀಕರಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದೆ. ಅಗತ್ಯವಿದ್ದಲ್ಲಿ ಆಯೋಗ ಸ್ವತಃ ಧರ್ಮಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆಯೂ ಇದೆ.
ಸಮಾಜದ ವಿವಿಧ ವಲಯಗಳಿಂದ ಈ ಮನವಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರ ತನಿಖೆಯ ಪಾರದರ್ಶಕತೆ ಹಾಗೂ ನ್ಯಾಯಪ್ರಕ್ರಿಯೆಯ ವೇಗವನ್ನು ಖಾತ್ರಿಪಡಿಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
