ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಜೊತೆಯಾಗಿ ಎದುರಿಸಲಿವೆ. ಇದು ಹಳೆಯ ಸುದ್ದಿ ನಿಜ. ಹಾಗೆ ಈ ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳುವ ಯತ್ನ ಕೂಡ ನಡೆಯುತ್ತಿದೆ. ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ, ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಂಡು ಬರಬೇಕು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಪ್ರಮುಖ ನಾಯಕರ ಸಭೆ ಇದೇ ತಿಂಗಳ 29 ರಂದು ನಗರದಲ್ಲಿ ನಡೆಯಲಿದೆ. ಈ ಸಭೆಯನ್ನು ವ್ಯವಸ್ಥೆ ಮಾಡಿದ್ದು ಕುಮಾರಸ್ವಾಮಿ ಅವರು. ಬಿಜೆಪಿ ಅಲ್ಲ. ಇದೇ ಕೆಲವು ಅಂಶಗಳನ್ನು ಸ್ಪಷ್ಟ ಪಡಿಸುತ್ತದೆ. ಒಂದು ಜೆಡಿಎಸ್ ಗೆ ಅಸ್ಥಿತ್ವದ ದೃಷ್ಟಿಯಿಂದ ಈ ಹೊಂದಾಣಿಕೆಯನ್ನು ಉಳಿಸಿಕೊಂಡು ಬರಬೇಕಾಗಿದೆ. ಹಾಗೆ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಹೀಗಾಗಿ ಅವರು ಮೈತ್ರಿ ಧರ್ಮ ಪಾಲನೆಯ ಮಾತನಾಡುತ್ತಿದ್ದಾರೆ. ಒಂದಾಗಿ ಮುಂದುವರಿಯೋಣ ಎನ್ನುತ್ತಿದ್ದಾರೆ.
ಆದರೆ ಬಿಜೆಪಿ ನಾಯಕರಲ್ಲಿ ಈ ಮನಸ್ಥಿತಿ ಕಾಣುತ್ತಿಲ್ಲ. ಮೈತ್ರಿ ಧರ್ಮದ ಬಗ್ಗೆ ಯಾವ ಬಿಜೆಪಿ ನಾಯಕರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ. ಆ ಅನಿವಾರ್ಯತೆ ಬಿಜೆಪಿ ನಾಯಕರಿಗೂ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ಜೆಡಿಎಸ್ ಜೊತೆಗಿನ ಹೊಂದಾಣಿಕೆ ತಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಎಂಬ ನಂಬಿಕೆ ಬಿಜೆಪಿಯ ಹಲವು ನಾಯಕರಿಗಿಲ್ಲ. ಜೊತೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಲದೇ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಹೆಚ್ಚಿನ ಲಾಭ ಆಗುತ್ತಿತ್ತು ಎಂದು ನಂಬಿರುವ ಹಲವು ನಾಯಕರೂ ಬಿಜೆಪಿಯಲ್ಲಿದ್ದಾರೆ.
ಇಂತಹ ನಾಯಕರದು ಒಂದು ರೀತಿಯ ಅಸಹಾಯಕ ಸ್ಥಿತಿ. ರಾಜ್ಯ ಬಿಜೆಪಿಯ ಯಾವ ನಾಯಕರೂ ಈ ಮೈತ್ರಿ ಹೊಂದಾಣಿಕೆಯಲ್ಲಿ ಪಾಲ್ಗೊಂಡವರಲ್ಲ. ಅವರನ್ನು ಕೇಳಿಕೊಂಡೂ ಈ ಮೈತ್ರಿ ಆಗಿಲ್ಲ. ಈ ಮೈತ್ರಿ ತೀರ್ಮಾನ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ಒಹಿಸಿದವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ. ದೇವೇಗೌಡರು ಮತ್ತು ಕುಮಾರಸ್ವಾಮಿ ದೆಹಲಿಗೆ ಹೋದರು. ಮೋದಿ ಅಮಿತ್ ಷಾ ಅವರ ಜೊತೆ ಮಾತನಾಡಿ ಹೊಂದಾಣಿಕೆ ಮಾಡಿಕೊಂಡು ಬಂದರು ಅಷ್ಟೇ. ಇಲ್ಲಿ ಸ್ಥಳೀಯ ಬಿಜೆಪಿ ನಾಯಕರ ಪಾತ್ರ ಸೊನ್ನೆ. ಈಗ ಬಿಜೆಪಿ ಸ್ಠಳೀಯ ನಾಯಕರು ವಿಚಿತ್ರ ಪರಿಸ್ಥಿತಿಗೆ ತಲೆ ಒಡ್ಡಬೇಕಾಗಿದೆ.
ಎಲ್ಲ ವಿಚಾರಗಳ ಬಗ್ಗೆ ದೇವೇಗೌಡರು ಅತ್ತು ಕುಮಾರಸ್ವಾಮಿ ದೆಹಲಿಯಲ್ಲಿ ತೀರ್ಮಾನ ತೆಗೆದುಕೊಂಡು ಬರುತ್ತಾರೆ. ಇಲ್ಲಿನ ನಾಯಕರ ಕೆಲಸ ಎಂದರೆ ದೆಹಲಿಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಅನುಷ್ಟಾನ ಗೊಳಿಸುವುದು ಮಾತ್ರ. ಜೊತೆಗೆ ಕುಮಾರಸ್ವಾಮಿಯವರನ್ನು ಗುಡ್ ಬುಕ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ದೆಹಲಿಗೆ ದೊರು ತಲುಪಿಸಿ ಬತ್ತಿ ಇಟ್ಟು ಬಂದು ಬಿಡುತ್ತಾರೆ.
ಇದೇ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಸಭೆ ನಡೆಸಿದಾಗ ತಮ್ಮನ್ನು ಕರೆಯಲಿಲ್ಲ, ಇದು ಮೈತ್ರಿ ಧರ್ಮ ಅಲ್ಲ ಎಂದು ಕುಮಾರಸ್ವಾಮಿ ತಕರಾರು ತೆಗೆದರು. ಈ ತಕರಾರು ದೆಹಲಿಯನ್ನು ತಲುಪಿತು. ಈ ಬೆಳವಣಿಗೆಯ ನಂತರ ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಸಾಧಿಸಲು ಸಮನ್ವಯ ಸಮಿತಿ ರಚಿಸಬೇಕು ಎಂಬ ಕುಮಾರಸ್ವಾಮಿ ಅವರ ಒತ್ತಾಯಕ್ಕೆ ಬಿಜೆಪಿ ಮಣಿಯ ಬೇಕಾಯಿತು.
ಅಂದರೆ ಈ ಮೈತ್ರಿಯಲ್ಲಿ ಕುಮಾರಸ್ವಾಮಿ ಅವರು ಮೇಲುಗೈ ಸಾಧಿಸುತ್ತಿದ್ದಾರೆ. ಅವರು ಹೆಳುತ್ತಿರುವುವುದು ಸದ್ಯಕ್ಕಂತೂ ಪಾಲನೆಯಗುತ್ತಿದೆ. ರಾಜ್ಯ ಬಿಜೆಪಿ ನಾಯಕರು ಜೋಕರ್ ಗಳಾಗುತ್ತಿದ್ದಾರೆ. ಇದು ರಾಜ್ಯ ಬಿಜೆಪಿಯ ಹಲವು ನಾಯಕರನ್ನು ಕೆರಳಿಸಿದೆ. ಆದರೆ ಅವರ ಸ್ಥಿತಿ ಹೇಗಿದೆ ಎಂದರೆ ಏನನ್ನೂ ಹೇಳುವಂತೆಯೂ ಇಲ್ಲ ಅನುಭವಿಸುವಂತೆಯೂ ಇಲ್ಲ…!
ಈ ಚುನಾವಣೆಯ ನಂತರ ಫಲಿತಾಂಶ ಏನೇ ಬರಲಿ ಅದರ ಲಾಭವನ್ನು ಪಡೆಯುವುದು ಜೆಡಿಎಸ್ ಪಕ್ಷವೇ ಹೊರತೂ ಬಿಜೆಪಿ ಅಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಕನಿಷ್ಠ ಆ ಸ್ಥಾನಗಳನ್ನಾದರೂ ಉಳಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಈ ಮೈತ್ರಿಗೆ ಕವಡೆ ಕಾಸಿನ ಬೆಲೆಯೂ ಇರಲಾರದು. ಆದರೆ ಈ ಗುರು ಮುಟ್ಟುವುದು ಅಷ್ಟು ಸುಲಭ ಅಲ್ಲ.
ಒಂದೊಮ್ಮೆ ನಿರೀಕ್ಷಿತ ಸೀಟುಗಳು ಬರದಿದ್ದರೆ ಅದರ ಹೊಣೆ ಮೋದಿ ಅವರದೋ ಅಮಿತ್ ಶಾ ಅವರದೋ ಆಗುವುದಿಲ್ಲ. ಆ ಹೊಣೆಯನ್ನು ಬಿಜೆಪಿಯ ಸ್ಥಳೀಯ ನಾಯಕರೇ ಹೊರಬೇಕು. ವಿಜಯೇಂದ್ರ ಯಡಿಯೂರಪ್ಪ ತಲೆ ಕೊಡಬೇಕು. ಜೆಡಿಎಸ್ ನಿಂದ ಯಾವುದೇ ತಪ್ಪುಗಳಾಗಲಿ ಅದರ ಹೊಣೆಗಾರಿಕೆಯೂ ಇವರದೇ ಆಗುತ್ತದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಒಳಗೊಳಗೆ ಕುದಿಯುತ್ತಿದ್ದಾರೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಯಾವುದೇ ರಾಜಕೀಯ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಇಲ್ಲದಿದ್ದರೆ ಹೀಗಾಗುತ್ತದೆ. ಸರ್ವಾಧಿಕಾರಿ ರಾಜಕಾರಣದ ಜ್ವಲಂತ ಉದಾಹರಣೆ ಕೂಡ ಇದೇ ಆಗಿದೆ.







