ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಅಸಾಧ್ಯ: ಜಯಾ ಬಚ್ಚನ್

ನವದೆಹಲಿ: ನೀವು ದನಗಳನ್ನು ರಕ್ಷಿಸುತ್ತೀರಿ. ಮಹಿಳೆಯರನ್ನಲ್ಲ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಹತ್ಯೆಗೆ, ಬಿಜೆಪಿ ಯುವ ಮುಖಂಡ 11 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರಮುಖ ವಿಪಕ್ಷಗಳೆಲ್ಲವೂ ಆಡಳಿತಾರೂಢ ಬಿಜೆಪಿ ಈ ಕುರಿತು ಪ್ರತಿಕ್ರಿಸಬೇಕೆಂದು ಆಗ್ರಹಿಸಿದವು.

ಯಾರಿಗಾದರೂ ಹೀಗೆ ಮಾತನಾಡಲು ಎಷ್ಟು ಧೈರ್ಯವಿರಬೇಕು? ಇದು ಮಹಿಳೆಯರ ರಕ್ಷಣೆ ನೀವು ಕಂಡುಕೊಂಡಿರುವ ದಾರಿಯೇ? ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರು ಅಭದ್ರತೆ ಅನುಭವಿಸುತ್ತಿದ್ದಾರೆ. ಇಂಥ ಮಾತುಗಳಿಂದ ಏನನ್ನು ಪ್ರಚಾರ ಮಾಡುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ವಿಪಕ್ಷಗಳು ಜಯಾ ಅವರನ್ನು ಬೆಂಬಲಿಸಿದವು.ಬಿಜೆಪಿ ರೂಪಾ ಗಂಗೂಲಿ ಮಾತನಾಡಿ, ನಾನು ಕೂಡ ಮಹಿಳೆ, ಪೊಲೀಸರ ಮುಂದೆಯೇ ನನ್ನ ಮೇಲೆ ಹಲ್ಲೆಯಾಗಿದೆ. ಈ ಕುರಿತು ಸಿಎಂ (ಮಮತಾ ಬ್ಯಾನರ್ಜಿ) ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಸುಖೇಂದು ಶೇಖರ್ ಪ್ರಸ್ತಾಪಿಸಿದರು. ಪಶ್ಚಿಮ ಬಂಗಾಳದ ಸಿಎಂ ಅವರನ್ನು ರಾಕ್ಷಸಿ ಎಂದು ಕರೆಯಲಾಗಿದೆ. ಧರ್ಮದ ಹೆಸರಿನಲ್ಲಿ ಬಂಗಾಳದಲ್ಲಿ ಭಯೋತ್ಪಾದನೆ ನಡೆಸಲಾಗುತ್ತಿದೆ. ಇಂಥ ಘಟನೆಗಳು ಖಂಡನೀಯ ಎಂದರು.ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಇಂಥ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ರಾಜ್ಯ ಸರ್ಕಾರ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಹನುಮಾನ್ ಜಯಂತಿಯಂದು ಪಶ್ಚಿಮ ಬಂಗಾಳದ ಬಿರ್​​ಭೂಮ್​ನಲ್ಲಿ ನಡೆದ ರ್ಯಾಲಿಯೊಂದರ ವೇಳೆ ಪೊಲೀಸರು ಯುವಕರ ಮೇಲೆ ದಾಳಿ ನಡೆಸಿದ್ದರು. ಈ ವಿಷಯದ ಕುರಿತು ಪ್ರತಿಕ್ರಿಯಿಸಿದ್ದ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯ ಯೋಗೇಶ್ ವರ್ಷ್ಣೆ, ಮಮತಾ ಬ್ಯಾನರ್ಜಿಯವರ ತಲೆ ತಂದವರಿಗೆ 11 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು.

ಪ್ರದೀಪ್ ಮಾಲ್ಗುಡಿ , ನ್ಯಾಷನಲ್ ಡೆಸ್ಕ್ , ಸುದ್ದಿ ಟಿವಿ

0

Leave a Reply

Your email address will not be published. Required fields are marked *