ಸಾಧಿನೆಯ ಹಾದಿಯಲ್ಲಿ ಶ್ರಮ ಹಾಗೂ ಛಲ ಮುಖ್ಯ

ಬೆಳೆಯುವ ಸಿರಿ ಮೊಳೆಕೆಯಲ್ಲಿ ಅನ್ನುವಂತೆ ಯೋಗ ಪ್ರತಿಭೆಯೊಂದು ಚಿಕ್ಕವಯಸಿನಲ್ಲಿಯೇ ಸಾಧನೆಯ ಹಾದಿಯಲ್ಲಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಊರಿಗೆ ಮತ್ತು ಹೆತ್ತವರ ಗೌರವಕ್ಕೆ ಪಾತ್ರಳಾಗಿದ್ದಾಳೆ. ಚಂಡೀಗಢದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಯೋಜಿಸಿದ್ದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಕ್ಕೆ ಚಿನ್ನದ ಮೆರುಗು ತಂದ್ದಿದ್ದಾಳೆ. ಸಾಧನೆ ಮಾಡಿದ ಬಾಲಕಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಊರಿನವರು ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧಿಸುವ ಛಲ, ಶ್ರಮವಿದ್ದು ಗುರಿ ಮುಟ್ಟಲು ಪ್ರಯತ್ನಿಸಿದರೆ ಖಂಡಿತ ಫಲ ಸಿಕ್ಕೆ ಸಿಗುತ್ತದೆ. ಇದಕ್ಕೆ ಸಾಕ್ಷಿ ಈ ಹುಡುಗಿ. ದೇಹವನ್ನು ರಬ್ಬರಿನಂತೆ ಬೆಂಡಾಗಿಸುವ ಈ ಬಾಲೆಯ ದೇಹದಲ್ಲಿ ಅರಳುತ್ತದೆ ವಿವಿಧ ಯೋಗಾಸನಗಳು. ಬಹಳ ಕಷ್ಟಕರವಾದ ಯೋಗಾಸನಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಮಾಡಿ ಮುಗಿಸುತ್ತಾಳೆ. ಗಂಡಭೇರುಂಡಾಸನ, ಹನುಮಾನಾಸನ, ಪದ್ಮಾಸನ, ಗರ್ಭಾಸನ, ಶೀರ್ಷಾಸನ, ಚಕ್ರಾಸನ, ಸಂಪೂರ್ಣ ಚಕ್ರಾಸನ, ಶವಾಸನ, ಧನುರಾಸನ, ತೋಲಾಸನ ಮಾಡುವ ಮೂಲಕ ನೋಡುಗರನ್ನು ಚಕಿತಗೊಳಿಸುತ್ತಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಅಶ್ವತಪ್ಪ ಮತ್ತು ಯಶೋಧ ದಂಪತಿಯ ಮಗಳು ಈ ಗಾನಶ್ರೀ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಾನಶ್ರೀ 63 ನೇ ರಾಷ್ಟ್ರೀಯ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ ಛತ್ತೀಸ್​​ಗಡದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ. ಕಠಿಣ ಪರಿಶ್ರಮ ಪಡುತ್ತಿರುವ ಈಕೆ ಮುಂದೆ ಒಲಂಪಿಕ್ಸ್ ನಲ್ಲಿ ಜೆಮ್ನೆಸ್ಟಿಕ್ ವಿಭಾಗದಲ್ಲಿ ಭಾಗವಹಿಸುವ ಕನಸು ಕಂಡಿದ್ದಾಳೆ.

ಮೊದಲಿನಿಂದ ಉತ್ತರ ಭಾರತದವರನ್ನು ಎದುರಿಸಿ ಪ್ರಶಸ್ತಿ ಗಳಿಸೋದು ಕಷ್ಟವೇ ಆಗಿತ್ತು. ಅದರೆ ಈ ವರ್ಷ ಉತ್ತರ ಭಾರತದವರನ್ನು ಸೊಲಿಸುವಲ್ಲಿ ಕರ್ನಾಟಕದ ಸ್ಫರ್ಧಿಗಳು ಯಶಸ್ವಿಯಾಗಿದ್ದಾರೆ. ಒಟ್ಟು 42 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅತ್ಯಂತ ಕಷ್ಟಕರ ಮತ್ತು ಸವಾಲಿನಿಂದ ಕೂಡಿದ ಸ್ಪರ್ಧೆಯಲ್ಲಿ ಕರ್ನಾಟಕದ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಪದಕ ಗಳಿಸಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕ ಸಮಗ್ರ ಪ್ರಶಸ್ತಿಯನ್ನ ಗಳಿಸಿದ್ದು. ಇದೇ ಮೊದಲ ಬಾರಿಗೆ ಯೋಗ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಗಾನಶ್ರೀ ಚಿನ್ನದ ಪದಕ ತಂದಿದ್ದಾಳೆ.

ಗುರುಪ್ರಸಾದ್ ಹೆಚ್.ಪಿ, ಸುದ್ದಿಟಿವಿ, ದೊಡ್ಡಬಳ್ಳಾಪುರ

0

Leave a Reply

Your email address will not be published. Required fields are marked *